ಬೀದರ್:ಬೀದರ್ ಉತ್ಸವದಿಂದ ನಮ್ಮ ಜಿಲ್ಲೆಯ ಇತಿಹಾಸ ಮತ್ತು ಪರಂಪರೆ ಯುವ ಪೀಳಿಗೆಗೆ ತಿಳಿಯುವಂತಾಗಬೇಕು ಎಂದು ಕೇಂದ್ರದ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.
ನಿನ್ನೆ(ಶುಕ್ರವಾರ) ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೀದರ್ ಉತ್ಸವದ ಪ್ಲಾಟಿನಂ, ಡೈಮಂಡ್, ಗೋಲ್ಡ್ ಕಾರ್ಡ್ ಹಾಗೂ ಉತ್ಸವದ ಸಿಟ್ಟಿಂಗ್ ಲೇಔಟ್ ನಕ್ಷೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಮಾದರಿ ಉತ್ಸವಾಗಬೇಕು:ಬೀದರ್ ಉತ್ಸವಕ್ಕಾಗಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಬೇಕು ಮತ್ತು ನಗರದಲ್ಲಿರುವ ರಸ್ತೆಗಳು, ನೀರಿನ ವ್ಯವಸ್ಥೆ ಹಾಗೂ ಉತ್ಸವದ ದಿನಗಳಂದು ಪ್ರತಿಯೊಬ್ಬರೂ ತಮ್ಮ ಮನೆಗಳನ್ನು ತಳಿರು ತೋರಣಗಳಿಂದ ಅಲಂಕಾರ ಮಾಡಿ ಬೀದರ್ ನಗರ ಕಂಗೊಳಿಸುವಂತೆ ಮಾಡಬೇಕು. ಲಕ್ಷಾಂತರ ಜನರು ಈ ಉತ್ಸವಕ್ಕೆ ಬರುವುದರಿಂದ ಇದು ಮಾದರಿ ಉತ್ಸವಾಗಬೇಕು ಎಂದರು.
ಈ ಉತ್ಸವ ಜನರಿಂದ ಜನರಿಗೋಸ್ಕರ. ಜಿಲ್ಲಾಡಳಿತ ಮುತುವರ್ಜಿವಹಿಸಿ ಜನರ ಸಹಭಾಗಿತ್ವದಲ್ಲಿ ಅದ್ಧೂರಿ ಕಾರ್ಯಕ್ರಮ ಮಾಡುತ್ತಿದೆ. ಇದಕ್ಕಾಗಿ ಜಿಲ್ಲೆಯ ಜನತೆ ತಮ್ಮ ತನು, ಮನ, ಧನದಿಂದ ಎಲ್ಲರೂ ಸಹಕಾರ ನೀಡಬೇಕು. ಬೀದರ್ ಮಾತ್ರವಲ್ಲದೇ ಅಕ್ಕ ಪಕ್ಕದ ಇತರೆ ಜಿಲ್ಲೆಗಳಿಂದ ಬರುವವರಿಗೂ ಜಿಲ್ಲಾಡಳಿತ ಮುಕ್ತ ಅವಕಾಶ ನೀಡಿದೆ. ಇದರಿಂದ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೂ ಅನುಕೂಲವಾಗಲಿದೆ ಎಂದು ಹೇಳಿದರು.
2006ರಲ್ಲಿ ಪ್ರಾರಂಭವಾದ ಉತ್ಸವ:ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಬಂಡೆಪ್ಪ ಖಾಶೆಂಪೂರ ಮಾತನಾಡಿ, 2006ರಲ್ಲಿ ಬೀದರ್ ಉತ್ಸವವನ್ನು ಆರಂಭಿಸಲಾಯಿತು. ಕಳೆದ ಐದು ವರ್ಷಗಳಿಂದ ಈ ಉತ್ಸವ ಆಗಿರಲಿಲ್ಲ. ಅಂದು ಉತ್ಸವವಾದ ಮೇಲೆ ಬಹಳಷ್ಟು ಪ್ರವಾಸಿಗರು ನಮ್ಮ ಜಿಲ್ಲೆಗೆ ಬರತೊಡಗಿದರು ಮತ್ತು ಹಲವಾರು ಚಿತ್ರಗಳ ಶೂಟಿಂಗ್ ನಮ್ಮ ಜಿಲ್ಲೆಯಲ್ಲಿ ನಡೆದವು. ಇದರಲ್ಲಿ ಪತ್ರಕರ್ತರ ಪಾತ್ರ ಬಹಳ ಮುಖ್ಯ. ಉತ್ಸವದ ಕುರಿತು ಹೆಚ್ಚಿನ ಪ್ರಚಾರ ನೀಡಬೇಕು ಎಂದು ಕರೆ ನೀಡಿದರು.
ಬೀದರ್ ಶಾಸಕ ರಹೀಮ್ ಖಾನ್ ಮಾತನಾಡಿ, 60 ಕೋಟಿ ರೂ. ವೆಚ್ಚದಲ್ಲಿ ಬರುವ ಒಂದು ತಿಂಗಳೊಳಗಾಗಿ ಬೀದರ್ ರಸ್ತೆಗಳ ಸುಧಾರಣೆ ಮಾಡಲಾಗುತ್ತದೆ. ಕೋವಿಡ್ ಕಾರಣದಿಂದಾಗಿ ಬೀದರ್ ಉತ್ಸವ ಆಗಿರಲಿಲ್ಲ. ಈ ಹಿಂದೆ ಹರ್ಷ ಗುಪ್ತಾ ಅವರು ಜಿಲ್ಲಾಧಿಕಾರಿಯಾಗಿದ್ದಾಗ ಅದ್ಧೂರಿಯಾಗಿ ಉತ್ಸವ ಮಾಡಿದ್ದರು. ಅದೇ ರೀತಿ ಈಗಿನ ಜಿಲ್ಲಾಧಿಕಾರಿಗಳು ಕಾಳಜಿ ವಹಿಸಿ ಈ ಉತ್ಸವವನ್ನು ಮಾಡುತ್ತಿರುವುದರಿಂದ ಅವರಿಗೆ ಎಲ್ಲರೂ ಸಹಕಾರ ನೀಡಬೇಕು ಮತ್ತು ಬೀದರ್ನ ಜನತೆ ತಮ್ಮ ಕುಟುಂಬ ಸಮೇತರಾಗಿ ಈ ಉತ್ಸವದಲ್ಲಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮಾತನಾಡಿ, ಬೀದರ್ ಉತ್ಸವದ ಅಂಗವಾಗಿ ಪ್ಲಾಟಿನಂ, ಡೈಮಂಡ್, ಗೋಲ್ಡ್ ಕಾರ್ಡ್‌ಗಳನ್ನು ಬಿಡುಗಡೆ ಮಾಡಲಾಗಿದೆ. ಪ್ಲಾಟಿನಂ ಕಾರ್ಡ್ಗೆ 25 ಸಾವಿರ ರೂ., ಡೈಮಂಡ್ ಕಾರ್ಡ್ಗೆ 15 ಸಾವಿರ ರೂ. ಹಾಗೂ ಗೋಲ್ಡ್ ಕಾರ್ಡ್ಗೆ 10 ಸಾವಿರ ರೂ. ಇದೆ. ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಚೇರಿಯ ಪಿಡಿಡಿಯು ವಿಭಾಗದಲ್ಲಿ ನಾಳೆಯಿಂದಲೇ ಇವುಗಳನ್ನು ಖರೀದಿಸಬಹುದಾಗಿದೆ. ಈ ಕಾರ್ಡ್ಗಳಿಗೆ ಕ್ಯೂ. ಆರ್.ಕೋಡ್ ನೀಡಲಾಗಿದ್ದು, ಇದೇ ಕಾರ್ಡ್ ನಂಬರ್ ಅವರ ವಾಹನ ಪಾಸ್ಗೂ ಇರುತ್ತದೆ. ಒಟ್ಟು 3 ಸಾವಿರ ಕಾರ್ಡ್‌ಗಳನ್ನು ಪ್ರಿಂಟ್ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಕಾರ್ಡ್ ಬಿಡುಗಡೆಗೊಳಿಸಿದ ಕೇಂದ್ರ ಸಚಿವ ಭಗವಂತ ಖೂಬಾ, ಶಾಸಕ ರಹೀಮ ಖಾನ್, ಬಂಡೆಪ್ಪ ಖಾಶೆಂಪೂರ, ಹಜ್ ಸಮಿತಿ ಅಧ್ಯಕ್ಷರಾದ ರವೂಫುದ್ಧಿನ್ ಕಚೇರಿವಾಲೆ, ಬುಡಾ ಅಧ್ಯಕ್ಷ ಬಾಬುವಾಲಿ ಅವರು 25 ಸಾವಿರ ರೂ.ಗಳನ್ನು ನೀಡಿ ಪ್ಲಾಟಿನಂ ಕಾರ್ಡ್‌ಗಳನ್ನು ಖರೀದಿಸಿದರು.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಹಜ್ ಸಮಿತಿ ಅಧ್ಯಕ್ಷ ರವೂಫುದ್ಧಿನ್ ಕಚೇರಿವಾಲೆ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುವಾಲಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಎಂ., ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಸೇರಿದಂತೆ ಇತರೆ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಸಿಬ್ಬಂದಿ ಉಪಸ್ಥಿತರಿದ್ದರು.
ಇದನ್ನೂ ಓದಿ:ಶರಣ ಸಂಸ್ಕೃತಿ ಉತ್ಸವ: ಹುಲಸೂರನಲ್ಲಿ ವೈಭವದ ವಚನ ರಥೋತ್ಸವ