ಬಸವಕಲ್ಯಾಣ(ಬೀದರ್) :ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತಿದ್ದ ತಾಲೂಕಿನ ಜಾಜನಮುಗಳಿ ಗ್ರಾಮದ ಯೋಧ ತೀವ್ರ ಚಳಿ ತಾಳದೆ ಹುತಾತ್ಮರಾದ ಘಟನೆ ಜರುಗಿದೆ.
ಭಾರತೀಯ ಸೇನಾ ಪಡೆಯಲ್ಲಿ ಸುಬೇದಾರ್ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೀರಯೋಧ ಪ್ರಮೋದ್(ಪಿಂಟು) ನಾರಾಯಣ ಸೂರ್ಯವಂಶಿ (45) ಎಂಬುವರು ಹುತಾತ್ಮರಾಗಿದ್ದಾರೆ ಎಂದು ತಿಳಿದು ಬಂದಿದೆ.
ತಾಲೂಕಿನ ಜಾಜನಮುಗಳಿ ಗ್ರಾಮದ ಪ್ರಮೋದ್ ಅವರು ಕಳೆದ 25 ವರ್ಷಗಳಿಂದ ಭಾರತೀಯ ಸೇನಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಗಡಿಯಲ್ಲಿರುವ ಖುರ್ದಘಾಟ್‌ನ ಎತ್ತರದ ಪ್ರದೇಶದಲ್ಲಿ ಪ್ರತಿಕೂಲ ಹವಾಮಾನ, ತೀವ್ರ ಚಳಿಯಿಂದಾಗಿ ಶನಿವಾರ ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ ಎನ್ನಲಾಗುತ್ತಿದೆ.
ಪ್ರಮೋದ್ ಸೂರ್ಯವಂಶಿ ಅವರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ತಂದೆ-ತಾಯಿ ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ. ಪತ್ನಿ ಹಾಗೂ ಮಕ್ಕಳು ಅವರ ಜತೆಗೆ ಜಮ್ಮು-ಕಾಶ್ಮೀರದಲ್ಲಿಯೇ ವಾಸಿಸುತ್ತಿದ್ದರು. ಹಿರಿಯ ಸಹೋದರ ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಾರೆ ಎಂದು ತಿಳಿದು ಬಂದಿದೆ.
ವೀರಯೋಧ ಸುಬೇದಾರ್ ಪ್ರಮೋದ್ ಅವರ ಪಾರ್ಥಿರ ಶರೀರ ಶ್ರೀನಗರದಿಂದ ವಿಮಾನದ ಮೂಲಕ ಹೈದರಾಬಾದ್ಗೆ ತರಲಾಗುತ್ತಿದೆ. ಅಲ್ಲಿಂದ ಭಾನುವಾರ ಮಧ್ಯಾಹ್ನ (3ರ) ವೇಳೆಗೆ ತಾಲೂಕಿನ ಜಾಜಾನಮುಗಳಿ ಗ್ರಾಮಕ್ಕೆ ತಂದ ನಂತರ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಸಂಜೆ 5ರ ಸುಮಾರಿಗೆ ಅಂತ್ಯ ಸಂಸ್ಕಾರ ಜರುಗಲಿದೆ ಎಂದು ವಿಶ್ವಾಸಾರ್ಹ ಮೂಲಗಳಿಂದ ತಿಳಿದು ಬಂದಿದೆ.