ಬೀದರ್:ಲೋಕಸಭೆ ಚುನಾವಣೆ ಗುಂಗಿನಿಂದ ಹೊರ ಬರುವ ಮುನ್ನವೇ ಚುನಾವಣಾ ಆಯೋಗ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಘೋಷಣೆ ಮಾಡುವ ಮೂಲಕ ಜಿಲ್ಲೆಯಾದ್ಯಂತ ಜನರು ಪಾರ್ಲಿಮೆಂಟ್ ಚುನಾವಣೆ ಬಿಸಿಯಲ್ಲಿರುವಾಗಲೇ ಲೋಕಲ್ ಫೈಟ್ ಕಾವೇರಿಸಿದೆ.
ಸ್ಥಳೀಯ ಸಂಸ್ಥೆ ಚುನಾವಣಾ ಎಲೇಕ್ಷನ್ ಮೂಢ್ನಲ್ಲಿ ಬೀದರ್ ಜಿಲ್ಲೆಯ ಒಟ್ಟು ನಗರ ಸ್ಥಳೀಯ ಸಂಸ್ಥೆಗಳ 128 ವಾರ್ಡ್ಗಳಿಗೆ ಅಖಾಡ ಸಿದ್ಧವಾಗಿದೆ. ಇದಕ್ಕಾಗಿ 146809 ಜನ ಮತದಾರರಿದ್ದು, ಈ ಪೈಕಿ 73015 ಪುರುಷರು ಹಾಗೂ 67787 ಮಹಿಳಾ ಮತದಾರರು ಮತ ಚಲಾಯಿಸಲಿದ್ದಾರೆ. ಜಿಲ್ಲೆಯಲ್ಲಿ ಬೀದರ್ ನಗರಸಭೆ ಹಾಗೂ ಈಗಾಗಲೇ ಚುನಾವಣೆ ನಡೆದಿರುವ ಹಳ್ಳಿಖೇಡ ಪುರಸಭೆಯನ್ನು ಹೊರತುಪಡಿಸಿ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಿಗೆ ಮೇ 29 ಚುನಾವಣೆ ನಡೆಯಲಿದ್ದು, ಮೇ 31ರಂದು ಮತ ಎಣಿಕೆ ನಡೆಯಲಿದೆ ಎಂದು ಆಯೋಗ ಅಧಿಸೂಚನೆ ಹೊರಡಿಸಿದೆ.
ಇನ್ನು ಇದಕ್ಕಾಗಿ ಜಿಲ್ಲೆಯ 128 ವಾರ್ಡ್ಗಳಲ್ಲಿ 145 ಮತಗಟ್ಟೆಗಳು ಸ್ಥಾಪಿಸಲಾಗಿದ್ದು, ಶಾಂತಿಯುತ ಮತದಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಎಲ್ಲೆಲ್ಲಿ ಚುನಾವಣೆ:
ಬಸವಕಲ್ಯಾಣ ನಗರಸಭೆ ವ್ಯಾಪ್ತಿಯ ಒಟ್ಟು 31 ವಾರ್ಡ್ಗಳಿಗೆ ಚುನಾವಣೆ ನಡೆಯಲಿದ್ದು, ಇದಕ್ಕಾಗಿ 45 ಮತಗಟ್ಟೆ ವ್ಯವಸ್ಥೆ ಮಾಡಲಾಗಿದೆ. ಒಟ್ಟು 46629 ಮತದಾರರಿದ್ದು, ಈ ಪೈಕಿ 25470 ಪುರುಷ ಹಾಗೂ 23158 ಮಹಿಳಾ ಮತದಾರರು ಮತ ಹಕ್ಕು ಚಲಾಯಿಸಲಿದ್ದಾರೆ.
ಭಾಲ್ಕಿ ಪುರಸಭೆಯ ಒಟ್ಟು 27 ವಾರ್ಡ್ಗಳಿಗಾಗಿ 27 ಮತಗಟ್ಟೆ ಸ್ಥಾಪಿಸಲಾಗಿದ್ದು, 27188 ಜನ ಮತದಾರರಿದ್ದಾರೆ. ಈ ಪೈಕಿ 13999 ಪುರುಷರು ಹಾಗೂ 13118 ಮಹಿಳಾ ಮತದಾರರಿದ್ದಾರೆ.
ಹುಮನಾಬಾದ್ ಪುರಸಭೆಯ 27 ಸ್ಥಾನಕ್ಕೆ ನಡೆಯಲಿರುವ ಚುನಾವಣೆಗಾಗಿ 27 ಮತಗಟ್ಟೆ ವ್ಯವಸ್ಥೆ ಮಾಡಲಾಗಿದೆ. ಅದರಲ್ಲಿ ಒಟ್ಟು 32203 ಮತದಾರರಿದ್ದು, ಈ ಪೈಕಿ 16755 ಪುರುಷರು ಹಾಗೂ 15443 ಮಹಿಳಾ ಮತದಾರರು ಮತ ಚಲಾಯಿಸಲಿದ್ದಾರೆ.
ಚಿಟಗುಪ್ಪಾ ಪುರಸಭೆಯ 23 ವಾರ್ಡ್ಗಳಿಗಾಗಿ 23 ಮತಗಟ್ಟೆ ಸ್ಥಾಪಿಸಲಾಗಿದ್ದು, 19087 ಮತದಾರರಿದ್ದಾರೆ. ಈ ಪೈಕಿ 9784 ಪುರುಷರು ಹಾಗೂ 6695 ಮಹಿಳಾ ಮತದಾರರಿದ್ದಾರೆ.
ಇನ್ನು ಔರಾದ್ ಪಟ್ಟಣ ಪಂಚಾಯತ್ ವ್ಯಾಪ್ತಿಯ 20 ವಾರ್ಡ್ಗಳಿಗಾಗಿ 20 ಮತಗಟ್ಟೆ ಸ್ಥಾಪನೆ ಮಾಡಲಾಗಿದ್ದು, ಒಟ್ಟು 13702 ಜನ ಮತದಾರರ ಪೈಕಿ 7007 ಪುರುಷರು ಹಾಗೂ 6695 ಮಹಿಳಾ ಮತದಾರರಿದ್ದಾರೆನ್ನಲಾಗಿದೆ.