ಬೀದರ್: ಜಿಲ್ಲೆಯ ಜೀವನಾಡಿ ಅಂತಲೇ ಹೆಸರಾದ ಜಲಾಶಯ ಕಾರಂಜಾ. 1972ರಲ್ಲಿ ಈ ಡ್ಯಾಂ ನಿರ್ಮಾಣ ಮಾಡುವಾಗ ಒಟ್ಟು 15,000 ಎಕರೆ ಪ್ರದೇಶವನ್ನು ಮುಳುಗಡೆ ಪ್ರದೇಶವೆಂದು ಪರಿಗಣಿಸಲಾಗಿತ್ತು. ಆಗ ಸಮರ್ಪಕ ಜಮೀನು ಸರ್ವೇ ನಡೆಸಿ 7 ಟಿಎಂಸಿ ಸಾಮರ್ಥ್ಯದ ಕಾರಂಜಾ ಡ್ಯಾಂ ನಿರ್ಮಿಸಲಾಗಿತ್ತು. ಹಿನ್ನೀರಿನಿಂದ ನೆರೆ ಉಂಟಾಗುವ ರೈತರ ಜಮೀನುಗಳಿಗೆ ಪರಿಹಾರ ನೀಡಲಾಗಿತ್ತು. ಆದರೆ ನ್ಯಾಯಯುತ ಪರಿಹಾರ ಸಿಕ್ಕಿರಲಿಲ್ಲ. ಅದರ ನಡುವೆಯೇ ಪ್ರಸ್ತುತ ವರ್ಷ ಡ್ಯಾಂ ತುಂಬಿದ್ದು, ಜಲಾಶಯ ನಿರ್ಮಾಣಕ್ಕೆ ಭೂಮಿ ನೀಡಿದ ಸಂತ್ರಸ್ತ ರೈತರ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸಿದೆ.
ಕಾರಂಜಾ ಜಲಾಶಯ ಸಂತ್ರಸ್ತರ ಸಂಕಷ್ಟಕ್ಕೆ ಬೇಕಿದೆ ಸರ್ಕಾರದ ಸಹಾಯ ಹಸ್ತ ಬೀದರ್ ಜಿಲ್ಲೆಯಲ್ಲಿ ಮಳೆಯ ಅಬ್ಬರಕ್ಕೆ ಕಾರಂಜಾ ಜಲಾಶಯ ಭರ್ತಿಯಾಗಿದೆ. ಡ್ಯಾಂ ನಿರ್ಮಿಸುವ ಆರಂಭದಲ್ಲೇ 26 ಹಳ್ಳಿಗಳ 15000 ಎಕರೆ ಜಮೀನನ್ನು ಸರ್ವೇ ಮಾಡಲಾಗಿತ್ತು. ಆದರೆ ಈ ವರ್ಷ ಕಾರಂಜಾ ಜಲಾಶಯಕ್ಕೆ ಒಳಹರಿವು ಜಾಸ್ತಿಯಾದ್ದರಿಂದ ಹಿನ್ನೀರು ರೈತರ ಹೊಲಗಳಿಗೆ ನುಗ್ಗಿದೆ. ಅಲ್ಲದೆ ಸರ್ವೇ ಮಾಡಿದ್ದು 15000 ಎಕರೆಯಾದರೆ, ಹೆಚ್ಚುವರಿ 5000 ಎಕರೆಗೂ ಅಧಿಕ ನೀರು ನುಗ್ಗಿ ರೈತರ ಶ್ರಮ ನೀರುಪಾಲಾಗಿದೆ. ಬೆಳೆದಿದ್ದ ಕಬ್ಬು, ಉದ್ದು, ಸೋಯಾ, ತೊಗರಿ, ತೋಟಗಾರಿಕಾ ಬೆಳೆಗಳು ನೀರುಪಾಲಾಗಿವೆ. ಇದು ರೈತರ ಕಂಗೆಡಿಸಿದೆ. ಮೊದಲು ಸರ್ವೇ ಮಾಡಿದ 15000 ಎಕರೆಗೆ ಸರ್ಕಾರ ಸಮರ್ಪಕವಾದ ಪರಿಹಾರ ನೀಡಿಲ್ಲ. ಅಷ್ಟರಲ್ಲೇ ಹೆಚ್ಚುವರಿ 5000 ಎಕರೆ ಫಲವತ್ತಾದ ಭೂಮಿ ಮುಳುಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ತೆಲಂಗಾಣ ಭಾಗದಲ್ಲಿ ವಿಪರೀತ ಮಳೆಯಾಗುತ್ತಿರುವುದರಿಂದ ಬೀದರ್ ಜಿಲ್ಲೆಯ ಕಾರಂಜಾ ಡ್ಯಾಂಗೆ ಹರಿದು ಬರುವ ನೀರಿನ ಪ್ರಮಾಣ ಹೆಚ್ಚಾಗಿ ಜಲಾಶಯದ ನಾಲ್ಕು ಗೇಟ್ ಓಪನ್ ಮಾಡಿ ನೀರು ಹೊರಬಿಡಲಾಗಿದೆ. ಕಾರಂಜಾ ಜಲಾಶಯ ನಿರ್ಮಿಸಿದಾಗಿನಿಂದಲೂ ಪ್ರಸ್ತುತ ವರ್ಷ ಶೇಖರಣೆಯಾದಷ್ಟು ನೀರು ಸಂಗ್ರಹವಾಗಿರಲಿಲ್ಲ. ಇದು ರೈತರ ಕಂಗೆಡಿಸಿದೆ. ಮೊದಲೇ ಭೂಮಿ ಕಳೆದುಕೊಂಡವರಿಗೆ ಪರಿಹಾರ ನ್ಯಾಯಯುತವಾಗಿ ಸಿಕ್ಕಿಲ್ಲ. ಅಷ್ಟರಲ್ಲಿ ಹೆಚ್ಚುವರಿ 5000 ಎಕರೆ ಫಸಲು ಹೊತ್ತ ಜಮೀನಿಗೆ ನೀರು ನುಗ್ಗಿದೆ. ಮೊದಲೇ ಮಳೆಯಿಂದ ತತ್ತರಿಸಿರುವ ಬೀದರ್ ಜಿಲ್ಲೆಯ ರೈತರಿಗೆ ಹೆಚ್ಚಾಗುತ್ತಿರುವ ಕಾರಂಜಾ ಜಲಾಶಯದ ಹಿನ್ನೀರಿನ ಪ್ರಮಾಣ ಆತಂಕಕ್ಕೆ ಕಾರಣವಾಗಿದೆ. ಹೆಚ್ಚುವರಿ ಮುಳುಗಡೆಯಾಗಿರುವ 5000 ಎಕರೆ ಜಮೀನಿನ ಪ್ರದೇಶವನ್ನು ಸರ್ವೇ ಮಾಡಿ ಪರಿಹಾರವನ್ನು ಕೂಡಲೇ ನೀಡಬೇಕೆಂದು ಈ ಭಾಗದ ರೈತರ ಆಗ್ರಹಿಸುತ್ತಿದ್ದಾರೆ. ಅಲ್ಲದೇ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ಸರ್ಕಾರ ಗಮನ ಹರಿಸಬೇಕು ಎಂದು ಈಶ್ವರ್ ಖಂಡ್ರೆ ಕಿಡಿಕಾರಿದ್ದಾರೆ.
ಸದ್ಯ ಬೀದರ್ ಜಿಲ್ಲೆಯ ರೈತರ ಪರಿಸ್ಥಿತಿ ಒಂದು ಕಡೆ ಜಲಾಶಯ ತುಂಬಿದ್ದಕ್ಕೆ ಖುಷಿ ಪಡಬೇಕೋ? ಅದೇ ಜಲಾಶಯದ ಹಿನ್ನೀರು ಜಮೀನಿನಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಸಿರುವುದರಿಂದ ದುಃಖಿಸಬೇಕೋ ಎಂಬುದು ತಿಳಿಯದಂತಾಗಿದೆ. ಮೊದಲಿನ ಪರಿಹಾರವೇ ನ್ಯಾಯಯುತವಾಗಿ ಕೈ ಸೇರಿಲ್ಲ. ಅಷ್ಟರಲ್ಲಿ ಮತ್ತೆ ಹೆಚ್ಚುವರಿ ಜಮೀನು ಮುಳುಗಡೆಯಾಗಿರುವುದು ಸಾವಿರಾರು ರೈತ ಕುಟುಂಬಗಳ ನಿದ್ದೆಗೆಡಿಸಿದೆ.