ಬೀದರ್: ಶಿವನ ಕುದುರೆ ಜಾತಿಗೆ ಸೇರಿದ ಡೆಸರ್ಟ್ ಲೋಕಸ್ಟ್ ಮಿಡತೆಯ ಸಾಮೂಹಿಕ ಹಿಂಡು ಮಹಾರಾಷ್ಟ್ರದ ನಾಗಪುರದಲ್ಲಿ ಕಾಲಿಡುತ್ತಿದ್ದಂತೆ ಕೊರೊನಾ ನಿಯಂತ್ರಣ ಕಾರ್ಯದಲ್ಲಿ ನಿರತವಾಗಿರುವ ಗಡಿ ಜಿಲ್ಲೆ ಬೀದರ್ ಜಿಲ್ಲಾಡಳಿತ ಅಲರ್ಟ್ ಆಗಿದೆ. ಯಾವುದೇ ಕ್ಷಣದಲ್ಲಾದರೂ ಮಿಡತೆ ರಾಜ್ಯಕ್ಕೆ ಎಂಟ್ರಿ ಕೊಡಬಹುದೆಂಬ ಭೀತಿ ಹಿನ್ನೆಲೆ ಜಿಲ್ಲಾಧಿಕಾರಿ ಡಾ. ಹೆಚ್.ಆರ್.ಮಹದೇವ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು.
ಮಿಡತೆ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಬೀದರ್ ಜಿಲ್ಲಾಡಳಿತ ರೆಡಿ! ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಪಂಚಾಯತ್ ಸಿಇಒ, ಎಸ್ಪಿ ಸಮ್ಮುಖದಲ್ಲಿ ಕೃಷಿ, ತೋಟಗಾರಿಕಾ ಮತ್ತು ಕೃಷಿ ವಿಜ್ಞಾನಿಗಳೊಂದಿಗೆ ತುರ್ತು ಸಭೆ ನಡೆಸಿದ ಡಿಸಿ ಮಹದೇವ್, ಮಿಡತೆಯ ಬಗ್ಗೆ ಮಾಹಿತಿ ಪಡೆದರು. ತಹಶೀಲ್ದಾರ, ಕೃಷಿ, ಅರಣ್ಯ, ತೋಟಗಾರಿಕಾ, ಅಗ್ನಿಶಾಮಕ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಿಡತೆ ನಿರ್ವಹಣಾ ಕ್ರಮಗಳ ಕುರಿತು ಸೂಚನೆ ನೀಡಿದರು.
ಮಿಡತೆ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಬೀದರ್ ಜಿಲ್ಲಾಡಳಿತ ರೆಡಿ! ಮಿಡತೆ ಹಿಂಡು ಬೀದರ್ ಜಿಲ್ಲೆಗೆ ಬರುವ ಸಾಧ್ಯತೆ ತುಂಬಾ ಕಡಿಮೆ. ಆದರೂ ನಾವು ಇದನ್ನು ಹಗುರವಾಗಿ ತೆಗೆದುಕೊಳ್ಳಬಾರದು. ಮುನ್ನೆಚ್ಚರಿಕೆ ವಹಿಸಲೇಬೇಕು. ಆದ್ದರಿಂದ ಜಿಲ್ಲಾದ್ಯಂತ ತಾಲೂಕುವಾರು ಇರುವ ಕಬ್ಬು, ತೋಟಗಾರಿಕೆ ಮತ್ತು ಅರಣ್ಯ ಬೆಳೆ ಸೇರಿದಂತೆ ಎಲ್ಲಾ ಹಸಿರು ಬೆಳೆ ಸಮೀಕ್ಷೆ ನಡೆಸಬೇಕು. ಬೆಳೆಗಳನ್ನು ಗುರುತಿಸಿದ ಬಳಿಕ ಅದನ್ನು ಉಳಿಸಿಕೊಳ್ಳಲು ರೈತರಿಗೆ ತಿಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬೀದರ್ನಲ್ಲಿ ಅರಣ್ಯ ಪ್ರದೇಶ ಹೆಚ್ಚಿನ ಪ್ರಮಾಣದಲ್ಲಿದ್ದು, ಅರಣ್ಯ ಅಧಿಕಾರಿಗಳು ಸಾಕಷ್ಟು ಮುಂಜಾಗ್ರತೆ ವಹಿಸಬೇಕು. ಒಂದು ವೇಳೆ ಮಿಡತೆಗಳು ದಾಳಿ ಮಾಡಿದಲ್ಲಿ ಜೈವಿಕ ಕೀಟನಾಶಕಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದರು. ಇದೇ ವೇಳೆ ಜೋರಾಗಿ ಸದ್ದು ಮಾಡುವ ಮೂಲಕ, ಬೆಂಕಿ ಹಾಕುವ ಮೂಲಕ, ಧೂಳೀಕರಣದ ಮೂಲಕ ಮಿಡಿತೆ ದಾಳಿಯನ್ನು ತಡೆಯಬಹುದು ಎಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿ ಸುನೀಲ್ ಕುಮಾರ ಮಾತನಾಡಿ, ಈ ಮಿಡತೆಗಳು ಸೂರ್ಯಾಭಿಮುಖವಾಗಿ ಚಲಿಸುತ್ತವೆ. ಸೂರ್ಯ ಮುಳುಗಿದ ಮೇಲೆ ಬಹುತೇಕ ಚಲಿಸುವುದಿಲ್ಲ. ಒಂದು ವೇಳೆ ಸೂರ್ಯಾಸ್ತದ ಬಳಿಕ ಹಾರಾಟ ಆರಂಭಿಸಿದರೆ 10 ಗಂಟೆವರೆಗೆ ನಿರಂತರ ಹಾರಬಲ್ಲ ಸಾಮರ್ಥ್ಯ ಹೊಂದಿವೆ. ಯಾವುದೇ ಗಿಡ ಇರಲಿ, ಬೆಳೆ ಇರಲಿ ಎಲ್ಲವನ್ನು ನಿರ್ದಾಕ್ಷಿಣ್ಯವಾಗಿ ಭಕ್ಷ್ಯ ಮಾಡುತ್ತವೆ. ಮರುಭೂಮಿಯಂತಹ ಪ್ರದೇಶದಲ್ಲಿಯೇ ಇವುಗಳ ಸಂತಾನೋತ್ಪತ್ತಿ ಹೆಚ್ಚು. ಭಾರತದಂತಹ ದೇಶಗಳಲ್ಲಿ ಇದರ ಸಂತಾನೋತ್ಪತ್ತಿ ಬಹಳ ಕಡಿಮೆ. ಒಂದು ಕೀಟವು ಕನಿಷ್ಠ 600 ಮೊಟ್ಟೆ ಇಡುತ್ತದೆ. ಈ ಮಿಡತೆಗಳು ಆಫ್ರಿಕಾ, ಸೋಮಾಲಿಯಾ ಸೇರಿದಂತೆ ಬೇರೆ ಬೇರೆ ದೇಶಗಳಿಂದ ಭಾರತ ಪ್ರವೇಶಿಸಿ ಗುಜರಾತ್, ರಾಜಸ್ಥಾನ, ಪಂಜಾಬ್, ಹರಿಯಾಣ, ಮಧ್ಯಪ್ರದೇಶ ದಾಟಿ ಈಗ ಮಹಾರಾಷ್ಟ್ರ ಪ್ರವೇಶಿಸಿವೆ ಎಂದು ತಿಳಿಸಿದರು.