ಬಸವಕಲ್ಯಾಣ(ಬೀದರ್): ತಾಲೂಕಿನಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಪ್ರಯತ್ನಿಸಬೇಕು. ಸರ್ಕಾರದ ಮಾರ್ಗಸೂಚಿ ಮತ್ತು ಮುಂಜಾಗೃತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಲು ಕ್ರಮ ಕೈಗೊಳ್ಳಬೇಕು ಎಂದು ತಾ. ಪಂ. ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೋಡ ಸೂಚಿಸಿದರು.
ತಾ. ಪಂ. ಸಭಾಂಗಣದಲ್ಲಿ ನಡೆದ ತಾ. ಪಂ. ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊರೊನಾ ಸೋಂಕಿತರ ಅಂಕಿ-ಅಂಶಗಳ ಮಾಹಿತಿ ಪಡೆದು ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಕಲ್ಪಿಸುವಲ್ಲಿ ಕಾಳಜಿ ವಹಿಸಬೇಕು ಎಂದು ತಿಳಿಸಿದರು.
ತಾಲೂಕಿನಲ್ಲಿ ಇದುವರೆಗಿನ ಸೋಂಕಿತರ ಸಂಖ್ಯೆ 849 ಇದ್ದು, ಈ ಪೈಕಿ 721 ಜನ ಗುಣಮುಖರಾಗಿದ್ದಾರೆ. 102 ಸಕ್ರಿಯ ಪ್ರಕರಣಗಳಿವೆ. 46 ಜನ ಹೋಂ ಅಸೋಲೇಶನ್‌ನಲ್ಲಿದ್ದಾರೆ. ಇದುವರೆಗೆ ಕೊರೊನಾ ಹಾಗೂ ಅನ್ಯ ಕಾರಣದಿಂದಾಗಿ 26 ಜನ ಮೃತಪಟ್ಟಿದ್ದಾರೆ ಎಂದು ಟಿಎಚ್‌ಒ ಡಾ. ಶರಣಪ್ಪ ಮುಡಬಿ ಸಭೆಗೆ ಮಾಹಿತಿ ನೀಡಿದರು.
ನರೇಗಾ ಯೋಜನೆಯಡಿ ರೈತರು ಮಾಡಿದ ಕೆಲಸಕ್ಕೆ ಶಾಂತಲಿಂಗೇಶ್ವರ ಎಜೆನ್ಸಿ ಹೆಸರಲ್ಲಿ ಬಿಲ್ ಪಡೆದಿದ್ದಾರೆ. ಇದರಲ್ಲಿ ಅವ್ಯವಹಾರ ಕಂಡು ಬರುತ್ತಿದೆ. ಈ ಬಗ್ಗೆ ತನಿಖೆ ಆಗಬೇಕು ಎಂದು ಸದಸ್ಯ ರಾಜು ಢೊಲೆ ಒತ್ತಾಯಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಓಂಪ್ರಕಾಶ ಪಾಟೀಲ್ ಸೇರಿದಂತೆ ಇತರ ಸದಸ್ಯರು ಚರ್ಚೆಯಲ್ಲಿ ಭಾಗವಹಿಸಿದ್ದರು. ತಾಪಂ ಇಓ ಭಿರೇಂದ್ರಸಿಂಗ್ ಠಾಕೂರ್ ಕೂಡ ಉಪಸ್ಥಿತಿತರಿದ್ದರು.