ಬೀದರ್:ದಶಕಗಳಿಂದ ಗೋ.ರು ಚನ್ನಬಸವ ವರದಿ ಆಧರಿಸಿ ಸ್ಥಾಪನೆಯಾಗಬೇಕಾಗಿದ್ದ ವಿಶ್ವದ ಮೊದಲ ಸಂಸತ್ತು ಅನುಭವ ಮಂಟಪದ ಕನಸು ನನಸಾಗಲಿದೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಇಂದು 600 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಅನುಭವ ಮಂಟಪದ ಶಿಲಾನ್ಯಾಸ ಕಾರ್ಯಕ್ರಮ ನೆರವರಿಸಲಿದ್ದಾರೆ.
600 ಕೋಟಿ ರೂ. ವೆಚ್ಚದಲ್ಲಿ ನೂತನ ಅನುಭವ ಮಂಟಪ ನಿರ್ಮಾಣವಾಗಲಿದ್ದು, ಪ್ರವಾಸಿಗರನ್ನು ಕಲ್ಯಾಣ ನಾಡಿನತ್ತ ಸೆಳೆಯುವ ಮತ್ತು 12ನೇ ಶತಮಾನದ ವಚನ ಸಾಹಿತ್ಯದ ಮೂಲಕ ಶರಣರು ಲೋಕಕ್ಕೆ ನೀಡಿರುವ ಸಾಮಾಜಿಕ ನ್ಯಾಯ ಬಿಂಬಿಸುವ ಮಾದರಿ ಸಂಸತ್ತು ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಈಗಾಗಲೇ ರಾಜ್ಯ ಸರ್ಕಾರ 100 ಕೋಟಿ ಬಿಡುಗಡೆ ಮಾಡಿದೆ. ಅಂದಾಜು 72 ಎಕರೆ ಪ್ರದೇಶದಲ್ಲಿ ಅನುಭವ ಮಂಟಪ ನಿರ್ಮಾಣವಾಗಲಿದ್ದು, 182 ಅಡಿ ಎತ್ತರ ಇರಲಿದೆ. ಅಂದುಕೊಂಡಂತೆ ಆದರೆ, ಎರಡು ವರ್ಷದ ಅವಧಿಯಲ್ಲಿ ನೂತನ ಅನುಭವ ಮಂಟಪ ಬಸವಕಲ್ಯಾಣದಲ್ಲಿ ನಿರ್ಮಾಣವಾಗಲಿದೆ.
ಬೆಳಗ್ಗೆ 9 ಗಂಟೆಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಬೀದರ್ ವಿಮಾನ ನಿಲ್ದಾಣಕ್ಕೆ ಪ್ರಯಾಣ ಮಾಡಿ 10:15ಕ್ಕೆ ಆಗಮಿಸಲಿದ್ದಾರೆ. ನಂತರ ಏರ್ ಬೇಸ್ನಿಂದ 10:30ಕ್ಕೆ ಬೀದರ್ ಓಲ್ಡ್ ಸಿಟಿಯಲ್ಲಿ ನಿರ್ಮಾಣಗೊಂಡಿರುವ 100 ಹಾಸಿಗೆಯ ತಾಯಿ ಹಾಗೂ ಮಕ್ಕಳ ಹೆರಿಗೆ ಆಸ್ಪತ್ರೆಯ ಉದ್ಘಾಟನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಬಳಿಕ ಬೀದರ್ ಏರ್ ಬೇಸ್ನಿಂದ 11:50ಕ್ಕೆ ಹೆಲಿಕಾಪ್ಟರ್ ಮೂಲಕ ಬಸವಕಲ್ಯಾಣಕ್ಕೆ ಪ್ರಯಾಣ ಮಾಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ 600 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಅನುಭವ ಮಂಟಪದ ಭೂಮಿಪೂಜೆ ನೆರವೇರಿಸಲಿದ್ದಾರೆ.
ಜೊತೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಸಾರ್ವಜನಿಕ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಇದಾದ ಬಳಿಕ ಮಧ್ಯಾಹ್ನ 2 ಗಂಟೆಗೆ ಬಸವಕಲ್ಯಾಣದಿಂದ ಹೆಲಿಕಾಪ್ಟರ್ ಮೂಲಕ ಯಾದಗಿರಿಗೆ ಪ್ರಯಾಣ ಮಾಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
108 ಅಡಿ ಎತ್ತರದ ಬಸವಣ್ಣ ಮೂರ್ತಿ: