ಬೀದರ್ :ತಾಲೂಕಿನ ನಾಗೋರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಾಕತಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸುಂದರ ಪೌಷ್ಠಿಕ ಕೈತೋಟ ರೂಪುಗೊಂಡಿದೆ. ಗ್ರಾಮ ಪಂಚಾಯಿತಿ ವತಿಯಿಂದ ತೋಟ ನಿರ್ಮಾಣವಾಗಿದ್ದು ಹಲವು ಬಗೆಯ ಸೊಪ್ಪು, ತರಕಾರಿ ಬೆಳೆಯುತ್ತಿದ್ದಾರೆ. ಶಾಲಾ ವಿದ್ಯಾರ್ಥಿಗಳ ಮಧ್ಯಾಹ್ನದ ಬಿಸಿಯೂಟಕ್ಕೆ ಇದರಿಂದ ಅನುಕೂಲವಾಗುತ್ತಿದೆ.
ನಾಗೋರಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಾಯತ್ರಿದೇವಿ ಹೊಸಮನಿ ಮಾತನಾಡಿ, ಕೈತೋಟದಲ್ಲಿ ಟೊಮೆಟೊ, ಮೆಂತೆ, ನುಗ್ಗೆ, ಅವರೆ, ಕೊತ್ತಂಬರಿ ಸೊಪ್ಪು, ಮೆಣಸಿನಕಾಯಿ ಸೇರಿ ವಿವಿಧ ತರಕಾರಿಗಳ ಬೀಜಗಳನ್ನು ಬಿತ್ತಲಾಗಿದೆ. ಕರಿಬೇವು, ತೆಂಗು, ಪೇರಲ, ನೇರಳೆ, ದಾಳಿಂಬೆ ಸಸಿಗಳನ್ನೂ ನೆಟ್ಟಿದ್ದೇವೆ. ಬೆಳೆದ ತರಕಾರಿಗಳನ್ನು ಬಿಸಿಯೂಟಕ್ಕೆ ಬಳಸುತ್ತಿದ್ದೇವೆ. ಶಾಲಾ ಆವರಣದಲ್ಲಿ ಕೊಳವೆಬಾವಿ ಇದ್ದು ನೀರುಣಿಸಲು ಸಮಸ್ಯೆ ಇಲ್ಲ ಎಂದರು.
ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗಬೇಕು. ಔಷಧರಹಿತ ತರಕಾರಿ ನೀಡಬೇಕು ಎಂಬ ಉದ್ದೇಶದಿಂದ ಕೈತೋಟವನ್ನು ಶಾಲಾ ಆವರಣದಲ್ಲೇ ನಿರ್ಮಿಸಲಾಗಿದೆ. ನಾಗೋರಾ ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳ ಸಹಕಾರದೊಂದಿಗೆ ಕೈತೋಟ ನಿರ್ಮಿಸಿ ಪೋಷಿಸಲಾಗುತ್ತಿದೆ ಎಂದು ಪಿಡಿಒ ಹೇಳಿದರು.