ಬಸವಕಲ್ಯಾಣ: ಪ್ರಸಕ್ತ ಸಾಲಿನಲ್ಲಿ ಮಳೆ-ಬೆಳೆ ಸಮೃದ್ಧಿ ಜೊತೆಗೆ ಕೊರೊನಾ ಮುಕ್ತ ಭಾರತಕ್ಕಾಗಿ ಪ್ರಾರ್ಥಿಸಿ ತಾಲೂಕಿನ ಯರಬಾಗ ಗ್ರಾಮಸ್ಥರು ಏಳು ಗ್ರಾಮಗಳಿಗೆ ಪಾದಯಾತ್ರೆಯ ಮೂಲಕ ತೆರಳಿ ಹನುಮಾನ ಮಂದಿರಗಳಲ್ಲಿ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದರು.
ಕೊರೊನಾ ಮುಕ್ತ ಭಾರತಕ್ಕಾಗಿ ಪ್ರಾರ್ಥಿಸಿ ಯರಬಾಗ ಗ್ರಾಮಸ್ಥರಿಂದ ಪಾದಯಾತ್ರೆ - Basavakalyana
ಕೊರೊನಾ ಮುಕ್ತ ಭಾರತಕ್ಕಾಗಿ ಪ್ರಾರ್ಥಿಸಿ ಬಸವಕಲ್ಯಾಣ ತಾಲೂಕಿನ ಯರಬಾಗ ಗ್ರಾಮಸ್ಥರು ಏಳು ಗ್ರಾಮಗಳಿಗೆ ಪಾದಯಾತ್ರೆಯ ಮೂಲಕ ತೆರಳಿ ಹನುಮಾನ ಮಂದಿರಗಳಲ್ಲಿ ಪೂಜೆ ಮತ್ತು ಪ್ರಾರ್ಥನೆ ಸಲ್ಲಿಸಿದರು.
ಯರಬಾಗ ಗ್ರಾಮದಲ್ಲಿನ ಲಕ್ಷ್ಮೀ ಮಂದಿರದಲ್ಲಿ 11 ದಿನಗಳ ಕಾಲ ನಿರಂತರ ದೀಪ ಬೆಳಗಿಸಿ, ಪ್ರತಿ ದಿನ ರಾತ್ರಿ ಭಜನೆ ಮಾಡಲಾಗಿದೆ. ಭಜನೆಯ ಸಮಾರೋಪದ ದಿನವಾದ ಶುಕ್ರವಾರ ಗ್ರಾಮದ ಹನುಮಾನ ಮಂದಿರದಲ್ಲಿ ಪೂಜೆ, ಭಜನೆ ಮಾಡಿ ಆರತಿ ಬೆಳಗಿದ ನಂತರ ಪಾದಯಾತ್ರೆ ಆರಂಭಿಸಲಾಯಿತು. ಗ್ರಾಮದಿಂದ ಸದಲಾಪೂರ, ಮುಸ್ತಾಪೂರ, ಮುಸ್ತಾಪೂರ ಪಾಟಿ, ಕಲ್ಲೂರ, ಬಸವತೀರ್ಥ ತಾಂಡಾ, ಬಸವಂತಪೂರ ಗ್ರಾಮಗಳಿಗೆ ಶ್ರದ್ಧೆಯಿಂದ ಭಜನೆ ಮಾಡುತ್ತಾ ಪಾದಯಾತ್ರೆ ಮೂಲಕ ತೆರಳಿ ಅಲ್ಲಿಯ ಹನುಮಾನ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕೊರೊನಾ ಮುಕ್ತ ಭಾರತಕ್ಕಾಗಿ ಪ್ರಾರ್ಥಿಸಿದರು.
ಪಾದಯಾತ್ರೆಯ ವೇಳೆ ಮಾಸ್ಕ್ ಧರಿಸಿ ಸಮಾಜಿಕ ಅಂತರವನ್ನು ಕಾಯ್ದುಕೊಂಡು ಭಜನೆ ಮಾಡುತ್ತಾ ಹೆಜ್ಜೆ ಹಾಕಿದ ಗ್ರಾಮಸ್ಥರು, ಕೊರೊನಾ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮಗಳನ್ನು ಪ್ರತಿಯೊಬ್ಬರು ಪಾಲಿಸಬೇಕು. ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎನ್ನುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಗ್ರಾಮದ ಅನೀಲಕುಮಾರ ಸ್ವಾಮಿ, ವಿಜಯಕುಮಾರ ಸ್ವಾಮಿ ನೇತೃತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ 50ಕ್ಕೂ ಹೆಚ್ಚು ಜನ ಭಾಗವಹಿಸಿದ್ದರು.