ಬಸವಕಲ್ಯಾಣ: ಮಹಾರಾಷ್ಟ್ರದ ಮುಂಬೈ ನಗರಕ್ಕೆ ತೆರಳಿ ಗ್ರಾಮಕ್ಕೆ ಮರಳಿದ ತಾಲೂಕಿನ ಮೂವರು ವಲಸೆ ಕಾರ್ಮಿಕರಲ್ಲಿ ಮಹಾಮಾರಿ ಕೊರೊನಾ ಸೋಂಕು ದೃಢಪಟ್ಟಿದೆ. ತಾಲೂಕಿನಲ್ಲಿ ಇದುವರೆಗೆ ಸೋಂಕು ಪತ್ತೆಯಾದವರ ಸಂಖ್ಯೆ 5ಕ್ಕೆ ಏರಿದೆ.
ತಾಲೂಕಿನ ಧನ್ನೂರ(ಕೆ)ವಾಡಿಯ ಒಂದೇ ಕುಟುಂಬದ ಇಬ್ಬರು ಮತ್ತು ಉಜಳಂಬ ಗ್ರಾಮದ ಯುವಕನೊಬ್ಬನಲ್ಲಿ ಸೋಂಕು ದೃಢಪಟ್ಟಿದ್ದು, ಇವರೆಲ್ಲರನ್ನು ಬೀದರ್ ನ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಧನ್ನೂರ(ಕೆ)ವಾಡಿಯ ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ಕಳೆದ 15ರಂದು ಮುಂಬೈನಿಂದ ವಾಡಿಗೆ ಮರಳಿದ್ದು, ನಾಲ್ವರು ಸಹ ಧನ್ನೂರಪುನರ್ ವಸತಿ ಕೇಂದ್ರದ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿದ್ದರು.
ಇವರಲ್ಲಿ 54 ವರ್ಷದ ಮಹಿಳೆ ಮತ್ತು ಇವರ 21 ವರ್ಷದ ಪುತ್ರನಲ್ಲಿ ಸೋಂಕು ಪತ್ತೆಯಾಗಿದೆ. ಮುಂಬೈಗೆ ತೆರಳಿದ ಉಜಳಂಬ ಗ್ರಾಮದ ಮೂವರು ಯುವಕರು ಕಳೆದ 13ರಂದು ಮುಂಬೈನಿಂದ ಗ್ರಾಮಕ್ಕೆ ಮರಳಿದ್ದು, ಗ್ರಾಮದ ಸರ್ಕಾರಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿದ್ದರು, ಇವರಲ್ಲಿ 24 ವರ್ಷದ ಓರ್ವ ಯುವಕನಿಗೆ ಕಳೆದ 17ರಂದು ನೆಗಡಿ ಸೇರಿದಂತೆ ಇತರ ಲಕ್ಷಣಗಳು ಕಂಡಬಂದ ಹಿನ್ನೆಲೆಯಲ್ಲಿ ನಗರದ ಸರ್ಕಾರಿ ಅಸ್ಪತ್ರೆ ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇತನಲ್ಲಿ ಭಾನುವಾರ ಸೋಂಕು ದೃಢಪಟ್ಟಿದ್ದು, ಬೀದರ್ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ.