ಬಸವಕಲ್ಯಾಣ:ನಗರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ಸರ್ಕಾರ ಮೀಸಲಾತಿ ಪ್ರಕಟಿಸಿದ್ದು, ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗಾಗಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಇಲ್ಲಿಯ 31 ಸದಸ್ಯ ಬಲದ ನಗರಸಭೆಯ ಅಧ್ಯಕ್ಷರ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷೆ ಸ್ಥಾನಕ್ಕೆ ಎಸ್ಸಿ ಮಹಿಳೆಗೆ ಮೀಸಲು ನಿಗದಿಪಡಿಸಲಾಗಿದೆ.
ನಗರಸಭೆಯಲ್ಲಿ ಕಾಂಗ್ರೆಸ್‌ನ 19 ಸ್ಥಾನಗಳಲ್ಲಿ, ಬಿಜೆಪಿ 5, ಜೆಡಿಎಸ್ 3, ಎಂಐಎ ಪಕ್ಷ 3 ಹಾಗೂ ವೆಲ್ಪೇರ್ ಪಾರ್ಟಿಆಫ್ ಇಂಡಿಯಾ 1 ಸದಸ್ಯರನ್ನು ಹೊಂದಿದೆ. 19 ಸ್ಥಾನಗಳನ್ನು ಪಡೆದಿರುವ ಕಾಂಗ್ರೆಸ್ ಪೂರ್ಣ ಅಧಿಕಾರಕ್ಕೆ ಏರಲು ಅಗತ್ಯವಿರುವ ಬಹುಮತ ಹೊಂದಿದೆ. ಕಳೆದ ಸಾಲಿನ ಮೇ ತಿಂಗಳಲ್ಲಿ ಚುನಾವಣೆ ನಡೆದರೂ, ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗಾಗಿ ಮೀಸಲಾತಿ ಸಂಬಂಧ ನಡೆದ ಗೊಂದಲದಿಂದಾಗಿ ಚುನಾವಣೆ ನಡೆದು 17 ತಿಂಗಳ ನಂತರ ಸರ್ಕಾರ ಮಿಸಲಾತಿ ಪ್ರಕಟಿಸಿದ್ದು, ಅಧಿಕಾರದ ಗದ್ದುಗೆ ಹಿಡಿಯಲು ಅರ್ಹ ಅಭ್ಯರ್ಥಿಗಳು ತೆರೆ ಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ.
ನಗರಸಭೆಯಲ್ಲಿ 19 ಸ್ಥಾನಗಳನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ಗದ್ದುಗೆ ಹಿಡಿಯಲು ಕಾತುರದಲಿದ್ದರೆ, 5 ಸ್ಥಾನಗಳನ್ನು ಹೊಂದಿರುವ ಬಿಜೆಪಿ ಹಾಗೂ ತಲಾ 3 ಸ್ಥಾನಗಳನ್ನು ಹೊಂದಿರುವ ಜೆಡಿಎಸ್ ಮತ್ತು ಎಂಐಎ ಪಕ್ಷದ ಸದಸ್ಯರು ತಮಗೂ ಅದೃಷ್ಟ ಖುಲಾಯಿಸುವ ನಿರೀಕ್ಷೆಯೊಂದಿಗೆ ಪ್ರಯತ್ನದಲಿದ್ದಂತೆ ಕಂಡು ಬರುತ್ತಿದೆ.
ದಿ.ಶಾಸಕ ಬಿ.ನಾರಾಯಣರಾವ ಅವರ ಪ್ರಯತ್ನದಿಂದಾಗಿ ಇಲ್ಲಿ ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಸಿಕ್ಕಿದ್ದು, ಆದರೆ ಅಧಿಕಾರದ ಗದ್ದುಗೆ ಹಿಡಿಯುವ ಮುನ್ನವೇ ಅವರ ಅಕಾಲಿಕ ನಿಧನದಿಂದಾಗಿ ಪಕ್ಷಕ್ಕೆ ದಿಕ್ಕುತೋಚದ ಸ್ಥಿತಿ ಎದುರಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ 7 ಜನ ಅರ್ಹರಿದ್ದರೆ, ಉಪಾಧ್ಯಕ್ಷ ಸ್ಥಾನಕ್ಕೆ ಇಲ್ಲಿ ಅಭ್ಯರ್ಥಿಗಳೇ ಇಲ್ಲದಿರುವ ಕಾರಣ ಉಪಾಧ್ಯಕ್ಷರ ಹುದ್ದೆ ಮತ್ತೊಂದು ಪಕ್ಷದ ಪಾಲಾಗಬೇಕಾದ ಅನಿರ್ವಾಯತೆ ಇಲ್ಲಿ ನಿರ್ಮಾಣವಾಗಿದೆ.
ಹಿಂದು-ಮುಸ್ಲಿಂ ನಡುವೆ ಮುಸುಕಿ ಗುದ್ದಾಟ :ನಗರಸಭೆಯಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಪಕ್ಷಗಳ ಕಸರತ್ತು ನಡೆಯುತ್ತಿರುವುದು ಒಂದೆಡೆಯಾದರೆ, ಧರ್ಮದ ಆಧಾರದಲ್ಲಿ ಅಧ್ಯಕ್ಷರ ಆಯ್ಕೆಯಾಗಬೇಕು ಎನ್ನುವ ಹಿಡನ್ ಅಜೆಂಡ ಇಲ್ಲಿ ಎದ್ದು ಕಾಣುತ್ತಿದೆ.
ಒಟ್ಟು 31 ಸದಸ್ಯ ಬಲದ ನಗರಸಭೆಯಲ್ಲಿ 17 ಮುಸ್ಲಿಂ ಹಾಗೂ 14 ಜನ ಸದಸ್ಯರು ಮಸ್ಲಿಮೇತರರಿದ್ದು, ಅತಿ ಹೆಚ್ಚು ಸಂಖ್ಯಾ ಬಲ ಹೊಂದಿರುವ ಮುಸ್ಲಿಮರಿಗೆ ಅಧ್ಯಕ್ಷ ಸ್ಥಾನ ದಕ್ಕಬೇಕು ಎನ್ನುವ ಮನೋಭಾವ ಅವರದ್ದಾದರೆ, ಸಾಮಾನ್ಯ ವರ್ಗಕ್ಕೆ ಮೀಸಲಿರುವ ಕಾರಣ ಯಾರೇ ಆಗಲಿ, ಮುಸ್ಲಿಮೇತರ ಲಿಂಗಾಯತ ಅಥವಾ ಇತರ ಜಾತಿ/ಉಪ ಪಂಗಡಗಳ ಸದಸ್ಯರೇ ಅಧ್ಯಕ್ಷರಾಗಬೇಕು ಎನ್ನುವುದು ಮುಸ್ಲಿಮೇತರ ಸದಸ್ಯರಲ್ಲಿ ಮನೋಭಾವ ವ್ಯಕ್ತವಾಗಿದೆ ಎನ್ನಲಾಗುತ್ತಿದೆ.
ಕಾಂಗ್ರೆಸ್‌ನಿಂದ ಆಯ್ಕೆಯಾದ ಒಟ್ಟು 19 ಜನ ಸದಸ್ಯರಲ್ಲಿ 13 ಜನ ಮುಸ್ಲಿಂ ಸದಸ್ಯರಿದ್ದರೆ, ಜೆಡಿಎಸ್‌ನಿಂದ 2, ಎಂಐಎ ಹಾಗೂ ಡಬ್ಲ್ಯೂಪಿಐನಿಂದ ತಲಾ ಒಬ್ಬರು ಮುಸ್ಲಿಂ ಸದಸ್ಯರಿದ್ದಾರೆ. ಅಧಿಕಾರ ಹಿಡಿಯಲು ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಹೊಂದಿದ್ದರೂ ಕೂಡ ಹಿಂದು, ಮುಸ್ಲಿಂ ಎನ್ನುವ ವಿಷಯ ಮುನ್ನೆಲೆಗೆ ಬಂದ ಕಾರಣ ಯಾರಿಗೆ ಆಯ್ಕೆ ಮಾಡಬೇಕು ಎನ್ನುವುದು ಆ ಪಕ್ಷದ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ ಎನ್ನಲಾಗುತ್ತಿದೆ.
ಕಾಂಗ್ರೆಸ್ ಪಕ್ಷದಿಂದ ಕಳೆದ ಅವಧಿಯಲ್ಲಿ ಅಧ್ಯಕ್ಷೆಯಾಗಿದ್ದ ಶಹಾಜಹಾನ್ ಶೇಖ್ ತನ್ವೀರ್ ಅಹ್ಮದ್ ಹಾಗೂ ಶಾಹಿದಾ ಸುಲ್ತಾನಾ ಅಫಸರ್ ಮುಸ್ಲಿಂ ಧರ್ಮದಿಂದ ಮುಂಚೂಣಿಯಲಿದ್ದರೆ, ಸುನೀತಾ ಸಂಜಯ ಸಿಂಗ್ ಹಜಾರಿ ಹಾಗೂ ನಿರ್ಮಲಬಾಯಿ ಶಿವಣಕರ್ ಮುಸ್ಲಿಮೇತರರಲ್ಲಿ ಮುಂಚೂಣಿಯಲಿದ್ದಾರೆ. ಬಿಜೆಪಿ, ಜೆಡಿಎಸ್ ಹಾಗೂ ಡಬ್ಲ್ಯೂಪಿಐನ ಸದಸ್ಯರು ಕಾದು ನೋಡುವ ತಂತ್ರ ಅನುಸರಿಸುತಿದ್ದಾರೆ ಎನ್ನಲಾಗಿದೆ.
ಕಳೆದ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಮೂವರು ಅಧ್ಯಕ್ಷರ ಪೈಕಿ ಮೂವರು ಕೂಡ ಮುಸ್ಲಿಮರೇ ಅಧಿಕಾರ ಅನುಭವಿಸಿದ್ದಾರೆ. ಈ ಬಾರಿಯಾದರು ನಮಗೆ ಅವಕಾಶ ಕಲ್ಪಿಸಬೇಕು ಎಂದು ಮುಸ್ಲಿಮೇತರ ಸದಸ್ಯರ ಅಭಿಪ್ರಾಯವಾದರೆ, ನಗರಸಭೆ ಬಿಟ್ಟರೆ ಉಳಿದ ಯಾವುದೇ ಪ್ರಮುಖ ರಾಜಕೀಯ ಹುದ್ದೇಯಲ್ಲಿ ಮುಸ್ಲಿಮರಿಗೆ ಅವಕಾಶ ಇಲ್ಲ. ಹೀಗಾಗಿ ನಗರಸಭೆಯಲ್ಲಿ ಅತಿ ಹೆಚ್ಚು ಸ್ಥಾನ ಹೊಂದಿರುವ ಮುಸ್ಲಿಮರಿಗೆ ಅವಕಾಶ ಕಲ್ಪಿಸಬೇಕು ಎನ್ನುವುದು ಮುಸ್ಲಿಂ ಸದಸ್ಯರ ಅಭಿಪ್ರಾಯವಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.