ಬಸವಕಲ್ಯಾಣ: ಅಧಿಕ ಮಳೆಯಿಂದಾಗಿ ಜಲಾವೃತಗೊಂಡ ಗೋರ್ಟಾ(ಬಿ) ದಲಿತರ ಬಡಾವಣೆಯನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಸಂಬಂಧ ಇಲ್ಲಿಯ ಮಿನಿ ವಿಧಾನಸೌಧಕ್ಕೆ ಆಗಮಿಸಿ ಗ್ರಾಮದ ಪ್ರಮುಖರ ನಿಯೋಗದ ಬೇಡಿಕೆ ಕುರಿತು ಬರೆದ ಮನವಿ ಪತ್ರವನ್ನು ಸ್ಥಳದಲ್ಲಿದ್ದ ಉಪ ತಹಶೀಲ್ದಾರ ಶಿವಾನಂದ ಮೇತ್ರೆ ಅವರಿಗೆ ಸಲ್ಲಿಸಿದರು.
ಅಧಿಕ ಮಳೆ ಆದಾಗಲೆಲ್ಲ ಗ್ರಾಮದ ಭೀಮ ನಗರದಲ್ಲಿರುವ ದಲಿತರ ಓಣಿಯಲ್ಲಿ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗುತ್ತಿದೆ. ಮನೆಗಳಲ್ಲಿನ ದವಸ ಧಾನ್ಯಗಳು ನೀರುಪಾಲಾಗುತ್ತಿವೆ. ನೀರಿನಿಂದಾಗಿ ಅನೇಕ ಮನೆಗಳು ಕುಸಿದು ಬಡವರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಆದರೆ ಸಮಸ್ಯೆ ಪರಿಹಾರಕ್ಕೆ ಈ ಹಿಂದೆ ಅನೇಕ ಬಾರಿ ಮನವಿ ಪತ್ರ ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭೀಮ ನಗರ ಬಡಾವಣೆ ಜನರನ್ನು ಬೇರೆ ಕಡೆ ಸ್ಥಳಾಂತರಿಸುವ ಸಂಬಂಧ ಗ್ರಾಮದ ವ್ಯಾಪ್ತಿಯಲ್ಲಿ ಸರ್ಕಾರದಿಂದ ಜಮೀನು ಗುರುತಿಸಲಾಗಿತ್ತು. ಆದರೆ ಆ ಸ್ಥಳ ವಾಸಿಸಲು ಯೋಗ್ಯವಿಲ್ಲದ ಕಾರಣ ಅಲ್ಲಿಗೆ ತೆರಳಲು ಜನ ಒಪ್ಪುತ್ತಿಲ್ಲ. ಕೂಡಲೇ ಬೇರೆ ಸ್ಥಳ ಗುರುತಿಸಿ ನಿವೇಶನ ಹಂಚಿಕೆ ಮಾಡುವ ಮೂಲಕ ಸಮಸ್ಯೆಯ ಸುಳಿಗೆ ಸಿಲುಕಿರುವ ದಲಿತ ಜನರಿಗೆ ಪುನರ್ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.