ಬೀದರ್:ಶರಣರ ನಾಡು, ವಚನ ಸಾಹಿತ್ಯದ ತವರೂರು ಕಲ್ಯಾಣ ಕ್ರಾಂತಿಯ ನೆಲದಲ್ಲಿ ಬೈ ಎಲೆಕ್ಷನ್ಗೆ ಮುಹೂರ್ತ ಫಿಕ್ಸ್ ಆಗ್ತಿದ್ದಂತೆ ಚುನಾವಣೆ ಕಣದಲ್ಲಿ ಅಗ್ನಿ ಪರೀಕ್ಷೆಗೆ ಧುಮುಕಲು ಆಕಾಂಕ್ಷಿಗಳು ಭಾರಿ ಪೈಪೋಟಿ ನಡೆಸಿದ್ದಾರೆ. ಈ ನಡುವೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಘೋಷಿಸಿದರೆ ಉಳಿದೆರಡು ಪಕ್ಷಗಳು ಎದುರಾಳಿಯನ್ನು ನೋಡಿ ಅಭ್ಯರ್ಥಿಯ ಆಯ್ಕೆಗೆ ತಯಾರಿ ನಡೆಸಿವೆ.
ಬಸವಕಲ್ಯಾಣ ಕಾಂಗ್ರೆಸ್ ಶಾಸಕ ಬಿ.ನಾರಾಯಣ್ ರಾವ್ ನಿಧನ ಬಳಿಕ ತೆರವುಗೊಂಡಿದ್ದ ಕ್ಷೇತ್ರಕ್ಕೆ ಉಪಚುನಾವಣೆ ದಿನಾಂಕ ನಿಗದಿಯಾಗಿದೆ. ಈ ನಡುವೆ ಎಲ್ಲಾ ರಾಜಕೀಯ ಪಕ್ಷಗಳು ಗೆಲ್ಲುವ ಕುದರೆಯನ್ನೇ ಅಖಾಡಕ್ಕಿಳಿಸಿ ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲೇಬೇಕು ಎಂದು ಭಾರಿ ಕಸರತ್ತು ನಡೆಸಿದ್ದಾರೆ.
ಬಿಜೆಪಿ ಆಕಾಂಕ್ಷಿಗಳು ರಾತ್ರೋರಾತ್ರಿ ಬೆಂಗಳೂರು ದೌಡಾಯಿಸಿದ್ದಾರೆ. ತಮ್ಮ ತಮ್ಮ ಆಪ್ತ ನಾಯಕರ ಭೇಟಿಗಾಗಿ ಕಸರತ್ತು ನಡೆಸಿದ್ದು ಟಿಕೆಟ್ಗಾಗಿ ಕೊನೆಯ ಹಂತದ ಪ್ರಯತ್ನ ನಡೆಸಿದ್ದಾರೆ. ಬಸವಕಲ್ಯಾಣದಲ್ಲಿ ಲಿಂಗಾಯತ ಸಮುದಾಯ ಪ್ರಭಾವ ಹಿನ್ನೆಲೆಯಲ್ಲಿ, ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಗುಮಾನಿಗಳು ಎದ್ದಿವೆ. ಇದರ ನಡುವೆ ಡಿಸಿಎಂ ಲಕ್ಷ್ಮಣ ಸವದಿ ಅವರ ಹೆಸರು ಸಹ ಕೇಳಿ ಬಂದಿದೆ. ಇದರಿಂದ ಸ್ಥಳೀಯ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಸಾಕಷ್ಟು ಅಸಮಾಧಾನ ಶುರುವಾಗಿತ್ತು.
ಒಂದು ಕಡೆ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ರೇಸಿನಲ್ಲಿದ್ದರೆ, ಮತ್ತೊಂದು ಕಡೆ ಜಿಲ್ಲಾಪಂಚಾಯತ್ ಸದಸ್ಯ ಗುಂಡೂರೆಡ್ಡಿ, ಮುಖಂಡರಾದ ಸೂರ್ಯಕಾಂತ ನಾಗಮಾರಪಳ್ಳಿ, ಶರಣು ಸಲಗಾರ್ ಹಾಗೂ ಪ್ರದೀಪ್ ವಾತಡೆ ಸೇರಿದಂತೆ ಹದಿನೆಂಟಕ್ಕೂ ಹೆಚ್ಚು ಜನ ಆಕಾಂಕ್ಷಿಗಳ ಪಟ್ಟಿ ಬೆಳೆದಿದೆ. ಈಗಾಗಲೇ ತಮ್ಮ ತಮ್ಮ ಆಪ್ತ ನಾಯಕರುಗಳ ಭೇಟಿಯಾಗಿ ಭಾರಿ ಲಾಬಿ ನಡೆಸಿದ್ದಾರೆ. ಬೆಂಗಳೂರಲ್ಲಿ ಡಿಸಿಎಂ ಲಕ್ಷ್ಮಣ ಸವದಿ ನಿವಾಸದಲ್ಲೂ ಒಂದು ಸುತ್ತಿನ ಮಾತುಕತೆ ನಡೆದಿದೆ.
ಲಿಂಗಾಯತ ಹೊರತುಪಡೆಸಿ ಬೆರೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕು ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ಈ ನಡುವೆ ಕಳೆದ ಕೆಲ ದಿನಗಳ ಹಿಂದಷ್ಟೇ ಬಸವಕಲ್ಯಾಣಕ್ಕೆ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ವಸತಿ ಸಚಿವ ಸೋಮಣ್ಣ ಆಗಮಿಸಿದ್ದಾಗ ಮತ್ತಿಬ್ಬರು ಪ್ರಭಾವಿ ನಾಯಕರುಗಳ ಸಹೋದರರು ಬಿಜೆಪಿ ಸೇರ್ಪಡೆಯಾಗಿದ್ದು, ಟಿಕೆಟ್ ಆಕಾಂಕ್ಷಿಗಳಲ್ಲಿ ಸಾಕಷ್ಟು ಆತಂಕ ಶುರುವಾಗಿದೆ.
ಇತ್ತ ಕಾಂಗ್ರೆಸ್ ಕೂಡ ಬಿ.ನಾರಾಯಣ ರಾವ್ ಅವರ ನಿಧನ ಬಳಿಕ ತೆರವುಗೊಂಡಿದ್ದ ಬಸವಕಲ್ಯಾಣ ಕ್ಷೇತ್ರವನ್ನು ಹೇಗಾದ್ರು ಮಾಡಿ ಮತ್ತೆ ಸ್ಥಾನ ಅಲಂಕರಿಸಲೇಬೇಕು ಎಂದು ಕೈ ನಾಯಕರು ಸಾಕಷ್ಟು ರಣತಂತ್ರ ನಡೆಸಿದ್ದಾರೆ. ದಿವಂಗತ ಬಿ.ನಾರಾಯಣ್ ಅವರ ಪತ್ನಿ ಮಲ್ಲಮ್ಮ ನಾರಾಯಣ್ ರಾವ್ ಅವರು ಅನುಕಂಪದ ಮೇಲೆ ಟಿಕೆಟ್ ನೀಡುವಂತೆ ಕೈ ನಾಯಕರ ಬಳಿ ಮನವಿ ಮಾಡಿಕೊಂಡಿದ್ದರು. ಈ ಅನುಕಂಪ ಜನರಲ್ಲಿ ವರ್ಕೌಟ್ ಆಗಬಹುದು ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ನಾಯಕರು ಕೂಡ ಮಲ್ಲಮ್ಮ ಅವರಿಗೆ ಟಿಕೆಟ್ ನೀಡಿದ್ದಾರೆ.
ಜೆಡಿಎಸ್ನಿಂದ ಪಿ.ಜಿ ಆರ್ ಸಿಂಧ್ಯಾ ಅವರನ್ನು ಕಣಕ್ಕಿಳಿಸಿತ್ತು. ಈ ಬಾರಿ ಮಾಜಿ ಶಾಸಕ ಎಂ.ಜಿ ಮೂಳೆ ಕೂಡ ಉಪ ಕದನದಲ್ಲಿ ಇಳಿಯಲಿದ್ದಾರೆ. ಹೀಗಾಗಿ ಅಹಿಂದ ಮತಗಳ ಮೇಲೆ ಪ್ರಭಾವ ಉಳಿಸಿಕೊಂಡಿರುವ ಜೆಡಿಎಸ್ ಕಲ್ಯಾಣದಲ್ಲಿ ಪ್ರಾಬಲ್ಯ ಸ್ಥಾಪನೆ ಮಾಡಲು ತಯಾರಿ ಮಾಡಿಕೊಂಡಿದೆ.
ಈ ನಡುವೆ ಅಲ್ಪಸಂಖ್ಯಾತ ಮತಗಳ ಧ್ರುವೀಕರಣಕ್ಕೆ ಎಎಂಐಎಂ ಪಕ್ಷ ಕೂಡ ಅಭ್ಯರ್ಥಿ ಕಣಕ್ಕಿಳಿಸಲಿದೆ ಎಂಬ ಲೆಕ್ಕಾಚಾರ ಇದೆ. ಯಾವ ಅಭ್ಯರ್ಥಿ ಕಣಕ್ಕಿಳಿಸಿದರೆ ವರ್ಕೌಟ್ ಆಗುತ್ತೆ ಎನ್ನುವ ಬಗ್ಗೆ ಅಳೆದು ತೂಗಿ ಲೆಕ್ಕಾಚಾರ ಹಾಕುತ್ತಿದ್ದಾರೆ. ಯಾವ ಪಕ್ಷದಲ್ಲಿ ಯಾರು ರೇಸ್ನಲ್ಲಿ ಬರುತ್ತಾರೆ, ಕೊನೆಯದಾಗಿ ಯಾರು ಅಭ್ಯರ್ಥಿಗಳಾಗಿ ಕಣದಲ್ಲಿರ್ತಾರೆ ಎನ್ನುವುದೇ ಕುತೂಹಲ.
ಇದನ್ನೂ ಓದಿ: ಬೆಳಗಾವಿ: ಸ್ಮಾರ್ಟ್ ಸಿಟಿ ಮುಖ್ಯ ಇಂಜಿನಿಯರ್ ಎಸಿಬಿ ಬಲೆಗೆ... 23.50 ಲಕ್ಷ ರೂ. ನಗದು ಪತ್ತೆ