ಬಸವಕಲ್ಯಾಣ/ಬೀದರ್: ಐತಿಹಾಸಿಕ ಮಂದಿರ, ತಾಲೂಕಿನ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿರುವ ಚಂಡಕಾಪುರದ ಅಮೃತಕುಂಡ ಅಗತ್ಯ ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿದೆ.
ಪುರಾತನ ಇತಿಹಾಸ ಹೊಂದಿರುವ ಅಮೃತಕುಂಡದಲ್ಲಿ ಸೂಕ್ತ ಸೌಕರ್ಯಗಳಿಲ್ಲದೆ ಪ್ರವಾಸಿಗರು ತೊಂದರೆ ಪಡುವಂತಾಗಿದೆ. ಕುಡಿಯಲು ಶುದ್ಧವಾದ ನೀರಿಲ್ಲ, ಪ್ರವಾಸಿಗರಿಗೆ ಉಳಿದುಕೊಳ್ಳಲು ಯಾತ್ರಿಕರ ನಿವಾಸವಿಲ್ಲ. ಇಲ್ಲಿಗೆ ಬಂದು ಪವಿತ್ರ ಸ್ನಾನ ಮಾಡುವ ಭಕ್ತಾದಿಗಳಿಗೆ ಬಟ್ಟೆ ಬದಲಾಯಿಸಲು ಅಗತ್ಯ ಕೋಣೆಗಳಿಲ್ಲ.
ಐತಿಹಾಸಿಕ ಪ್ರವಾಸಿ ಕೇಂದ್ರ ಅಮೃತಕುಂಡ ಕರ್ನಾಟಕ, ಮಹಾರಾಷ್ಟ್ರದ ಗಡಿ ಗ್ರಾಮವಾಗಿರುವ ಚಂಡಕಾಪುರದ ನಿಸರ್ಗದ ಮಡಿಲಿನಲ್ಲಿರುವ ಐತಿಹಾಸಿಕ ಸ್ಥಳದಲ್ಲಿ ಶ್ರೀ ರಾಮಲಿಂಗೇಶ್ವರ ದೇವಸ್ಥಾನವಿದ್ದು, ಹೆಸರೇ ಹೇಳುವಂತೆ ಇಲ್ಲಿ ಅಮೃತದಂತಹ ಮೂರು ನೀರಿನ ಹೊಂಡಗಳಿವೆ. ವರ್ಷದ 12 ತಿಂಗಳು ಇಲ್ಲಿಯ ಹೊಂಡಗಳಲ್ಲಿ ನೀರು ಹರಿಯುತ್ತಲೇ ಇರುತ್ತೆ.
ಮುಜರಾಯಿ ಇಲಾಖೆ ಆಡಳಿತ ವ್ಯಾಪ್ತಿಗೆ ಸೇರಿದ ಈ ಯಾತ್ರಾ ಸ್ಥಳಕ್ಕೆ ಬಸವಕಲ್ಯಾಣದ ಉಪ ವಿಭಾಗಾಧಿಕಾರಿಗಳು ಆಡಳಿತ ಅಧಿಕಾರಿಗಳಾಗಿದ್ದಾರೆ. ಪ್ರತಿ ವರ್ಷಕ್ಕೆ ಏನಿಲ್ಲವೆಂದರೂ ಸುಮಾರು 6 ಲಕ್ಷಕ್ಕೂ ಅಧಿಕ ಆದಾಯ ಬರುತ್ತಿದೆ. ಅಗತ್ಯ ಸೌಲಭ್ಯ ಕಲ್ಪಿಸಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ಸರ್ಕಾರ ಹಾಗೂ ಆಡಳಿತ ಮಂಡಳಿ ಗಮನ ಹರಿಸಬೇಕಿದೆ.