ಬಸವಕಲ್ಯಾಣ: ಉಪ ಚುನಾವಣೆ ನಿಮಿತ್ತ ನಗರದ ಅಕ್ಕ ಮಹಾದೇವಿ ಕಾಲೇಜು ಮೈದಾನದಲ್ಲಿ ಬಿಜೆಪಿ ಪಕ್ಷದಿಂದ ಆಯೋಜಿಸಿದ ಬಹಿರಂಗ ಸಮಾವೇಶದಲ್ಲಿ ಜರುಗಿದ ಕೆಲ ಪ್ರಸಂಗಗಳು ಚುನಾವಣೆ ಗೆಲ್ಲುವ ಹುಮ್ಮಸ್ಸಿನಲ್ಲಿದ್ದ ಬಿಜೆಪಿಗೆ ಆರಂಭದಲ್ಲೆ ವಿಘ್ನ ಎದುರಾದಂತೆ ಕಂಡು ಬಂತು.
ಖೂಬಾ, ಸವದಿ ಕರೆದರು ಬಾರದ ಆಕಾಂಕ್ಷಿಗಳು ಸಮಾವೇಶದ ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡುತ್ತಿದ್ದ ಸಂಸದ ಭಗವಂತ ಖೂಬಾ ಅವರು ಆಕಾಂಕ್ಷಿಗಳೆಲ್ಲರೂ ವೇದಿಕೆ ಮೇಲೆ ಆಗಮಿಸಬೇಕು ಎಂದು ಮನವಿ ಮಾಡಿದರು. ಆದರೆ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಮುಖಂಡರಾದ ಸಂಜಯ್ ಪಟವಾರಿ, ಸೂರ್ಯಕಾಂತ ನಾಗಮಾರಪಳ್ಳಿ, ಉಮೇಶ್ ಬಿರಬಿಟ್ಟೆ, ಪ್ರದೀಪ ವಾತಡೆ ಆದಿಯಾಗಿ ಎಲ್ಲಾ ಆಕಾಂಕ್ಷಿಗಳು ವೇದಿಕೆ ಮೇಲೆ ತೆರಳದೆ ಕೆಳಗಡೆಯೇ ಕುಳಿತುಕೊಳ್ಳುವ ಮೂಲಕ ಸ್ಥಳೀಯರೆಲ್ಲರೂ ಒಗ್ಗಟ್ಟು ಪ್ರದರ್ಶಿಸಿದರು.
ವೇದಿಕೆಯಲ್ಲಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ ಕಟೀಲ್, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೇರಿದಂತೆ ಸಚಿವರು, ಗಣ್ಯರೆಲ್ಲರು ಮೂಕ ಪ್ರೇಕ್ಷಕರಂತೆ ಗಮನಿಸುತ್ತ ಕುಳಿತರು.
ಸವದಿಗೂ ಜಗ್ಗದ ಸ್ಥಳೀಯ ಆಕಾಂಕ್ಷಿಗಳು:
ನಂತರ ವೇದಿಕೆಯಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಮಾತನಾಡುವ ವೇಳೆಗೆ ಎಲ್ಲಾ ಆಕಾಂಕ್ಷಿಗಳು ವೇದಿಕೆಗೆ ಬಂದು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಸೂಚಿಸಿದರು. ಆದರೆ ಸವದಿ ಸೂಚನೆಗೂ ಮಣಿಯದ ಸ್ಥಳೀಯ ಆಕಾಂಕ್ಷಿಗಳು, ವೇದಿಕೆಯಲ್ಲಿ ಮೊದಲೇ ಹೋಗಿ ನಿಂತಿದ್ದ ಶರಣು ಸಲಗರ ಅವರನ್ನು ವೇದಿಕೆಯಿಂದ ಕೆಳಗೆ ಇಳಿಸಬೇಕು ಎಂದು ಪಟ್ಟು ಹಿಡಿದು ವೇದಿಕೆಗೆ ತೆರಳಲು ನಿರಾಕರಿಸಿದರು.
ತಕ್ಷಣ ಸ್ಥಳೀಯ ಆಕಾಂಕ್ಷಿಗಳ ಬಳಿಗೆ ತೆರಳಿದ ಚುನಾವಣೆ ಉಸ್ತುವಾರಿಯೂ ಆಗಿರುವ ಸಚಿವ ವಿ.ಸೋಮಣ್ಣ, ಸೇಡಂ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಸೇರಿದಂತೆ ಕೆಲ ಮುಖಂಡರು, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಜಿಪಂ ಸದಸ್ಯ ಗುಂಡುರೆಡ್ಡಿ, ಸುಧೀರ ಕಾಡಾದಿ, ಉಮೇಶ ಬಿರಬಿಟ್ಟೆ, ಪ್ರದೀಪ ವಾತಡೆ, ಸಂಜಯ್ ಪಟವಾರಿ ಬಳಿಗೆ ತೆರಳಿ ಸ್ಥಳೀಯ ಆಕಾಂಕ್ಷಿಗಳೆಲ್ಲರೂ ಮೇಲೆ ಬರಬೇಕು ಎಂದು ಒತ್ತಾಯ ಮಾಡಿ ವೇದಿಕೆಗೆ ಕರೆದುಕೊಂಡು ಹೋದರು.
ನಂತರ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವ ವಿ. ಸೋಮಣ್ಣ ಅವರನ್ನು ವೇದಿಕೆಯಿಂದ ತಾವಿದ್ದ ಸ್ಥಳಕ್ಕೆ ಕರೆಸಿಕೊಂಡ ಸ್ಥಳೀಯ ಆಕಾಂಕ್ಷಿಗಳು, ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂದು ಮನವಿ ಮಾಡಿದರು.
ಉಪ ಚುನಾವಣೆಗಾಗಿ ಆಕಾಂಕ್ಷಿಗಳೆಲ್ಲರೂ ಒಂದಾಗಿ ಪಕ್ಷದ ವರಿಷ್ಠರು ಸೂಚಿಸಿದ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದು ಈ ಹಿಂದೆ ಉಪ ಮುಖ್ಯಮಂತ್ರಿ ಸವದಿ ಅವರು ಬೆಂಳಗಳೂರಿನ ಸಭೆಯಲ್ಲಿ ತಾಕೀತು ಮಾಡಿದ್ದರು. ಅಂದಿನಿಂದ ಸ್ಥಳೀಯ ಆಕಾಂಕ್ಷಿಗಳೆಲ್ಲರೂ ಪ್ರತ್ಯೇಕವಾಗಿ ಸುತ್ತಾಡದೆ ಒಂದಾಗಿಯೇ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡು ಒಗ್ಗಟ್ಟು ಪ್ರದರ್ಶಿಸಿದರು. ಆದರೆ ಸಮಾವೇಶದ ವೇಳೆಯಲ್ಲಿ ಮತ್ತೆ ಸ್ಥಳೀಯರು, ಹೊರಗಿನವರ ಮಧ್ಯೆ ಬಿರುಕು ಮೂಡಿದ್ದು, ಪಕ್ಷದ ರಾಜ್ಯಾಧ್ಯಕ್ಷರ ಸಮ್ಮುಖದಲ್ಲೇ ಈ ಎಲ್ಲಾ ಬೆಳವಣಿಗೆಗಳು ನಡೆದಿದ್ದು ಬಿಜೆಪಿ ಪಕ್ಷದಲ್ಲಿ ಮತ್ತೆ ಗೊಂದಲ ಸೃಷ್ಟಿ ಮಾಡಿದೆ.
ಬಿಜೆಪಿಗೆ ಸೇರ್ಪಡೆ:
ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲ ಅವರ ಸಹೋದರ ಸಂಬಂಧಿಯೂ ಆಗಿರುವ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸಿದ್ದು ಪಾಟೀಲ, ಮಾಜಿ ಶಾಸಕ ಅಶೋಕ ಖೇಣಿ ಸಹೋದರ ಸಂಜಯ ಖೇಣಿ, ಕಾಂಗ್ರೆಸ್ ಮುಖಂಡ ಬಾಬು ಟೈಗರ್ ಸೇರಿದಂತೆ ಹುಮನಾಬಾದ್ ಕೆಲ ಮುಖಂಡರು ತಮ್ಮ ಅಪಾರವಾದ ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಪಕ್ಷಕ್ಕೆ ಆಗಮಿಸಿದ ಮುಖಂಡರನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಅವರು ಪಕ್ಷದ ಧ್ವಜ ನೀಡಿ ಮುಖಂಡರನ್ನು ಬಿಜೆಪಿಗೆ ಬರಮಾಡಿಕೊಂಡರು.
ಕೈಮುಗಿದು, ಕಾಲಿಗೆ ಬಿದ್ದು ಕೇಳಿಕೊಳ್ಳುತ್ತೇನೆ. ಉಪ ಚುನಾವಣೆಯಲ್ಲಿ ಬಿಜೆಪಿಗೆ ಗೆಲ್ಲಿಸಿ, ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಮನವಿ ಮಾಡಿದ ಪ್ರಸಂಗ ಜರುಗಿತು.
ನಗರದಲ್ಲಿ ಆಯೋಜಿಸಿದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಟಿಕೆಟ್ ಆಕಾಂಕ್ಷಿಗಳೆಲ್ಲ ಸೇರಿ ಬಿಜೆಪಿ ಗೆಲ್ಲಿಸಲು ಶ್ರಮಿಸಬೇಕು ಎಂದು ಮನವಿ ಮಾಡಿದರು.
ಚುನಾವಣೆಯಲ್ಲಿ ಸ್ಪರ್ಧೆಗಾಗಿ ಟಿಕೆಟ್ ಕೇಳಿದವರಿಗೆಲ್ಲ ಅವಕಾಶ ಸಿಗಲು ಸಾಧ್ಯವಿಲ್ಲ. ಒಬ್ಬರಿಗೆ ಮಾತ್ರ ಬಿ ಫಾರ್ಮ್ ನೀಡಲು ಸಾಧ್ಯ. ಉಳಿದವರಿಗೂ ಪಕ್ಷ ಗುರುತಿಸಿ, ಸೂಕ್ತ ಸ್ಥಾನ ಮಾನ ಕಲ್ಪಿಸುತ್ತದೆ. ಎಲ್ಲರೂ ಕೂಡಿ ಒಗ್ಗಟ್ಟಿನಿಂದ ಕೆಲಸ ಮಾಡಿ ಪಕ್ಷದ ಗೆಲುವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.