ಬಸವಕಲ್ಯಾಣ: ವಿಶ್ವಗುರು ಬಸವಾದಿ ಶರಣರ ತತ್ವ ಸಂದೇಶಗಳನ್ನು ಆಳವಾಗಿ ಆಧ್ಯಯನ ಮಾಡಿ, ತಮ್ಮ ಜೀವನವನ್ನು ಬಸವತತ್ವದ ಪ್ರಚಾರಕ್ಕಾಗಿ ಮುಡಿಪಾಗಿರಿಸಿದವರು ಮಹಾಜಗದ್ಗುರು ಲಿಂ. ಲಿಂಗಾನಂದ ಮಹಾಸ್ವಾಮಿಗಳು ಎಂದು ಡಾ. ಮಾತೆ ಗಂಗಾದೇವಿ ನುಡಿದರು.
ಬಸವ ಧರ್ಮ ಪೀಠದ ಬಸವ ಮಹಾಮನೆಯಲ್ಲಿ ನಡೆದ ಲಿಂಗಾನಂದ ಸ್ವಾಮೀಜಿ ಅವರ 90ನೇ ಹುಟ್ಟುಹಬ್ಬ, ರಾಷ್ಟ್ರೀಯ ಬಸವದಳದ ಹುಟ್ಟುಹಬ್ಬ, 19ನೇ ಕಲ್ಯಾಣ ಪರ್ವದ ಪೂರ್ವ ಸಿದ್ಧತಾ ಸಭೆ ಹಾಗೂ ತಮ್ಮ 63ನೇ ಹುಟ್ಟು ಹಬ್ಬದ ನಿಮಿತ್ತ ನಡೆದ ಸರಳ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಬಸವಾದಿ ಶರಣರ ವಚನಗಳು ಜನರನ್ನು ಮತ್ತು ಜಗವನ್ನು ಬದುಕಿಸುವ ದಿವ್ಯ ಔಷದಿಗಳಾಗಿವೆ. ಜಗತ್ತಿನ ಅನೇಕ ಸಮಸ್ಯೆಗಳಿಗೆ ವಚನ ಸಾಹಿತ್ಯದಲ್ಲಿ ಪರಿಹಾರ ಅಡಗಿದೆ ಎನ್ನುವದನ್ನು ಅರಿತ ಲಿಂಗಾನಂದ ಸ್ವಾಮೀಜಿಯವರು. ಸ್ವಯಂಕೃತ ಜಂಗಮ ದೀಕ್ಷೆ ಹೊಂದಿ ಸ್ವಾಮಿ ಲಿಂಗಾನಂದರಾಗಿದ್ದು, ಲಿಂಗಾಯತ ಧರ್ಮೀಯರು ಎಂದೂ ಮರೆಯದ ಇತಿಹಾಸ ಎಂದರು.
ಬಳಿಕ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ಲಿಂಗಾನಂದ ಸ್ವಾಮೀಜಿಯವರು ಅವರು ಬದುಕಿರುವಾಗ ಒಂದು ದಿನವನ್ನೂ ವ್ಯರ್ಥ ಮಾಡದೆ ಧರ್ಮ ಪ್ರಸಾರಕ್ಕಾಗಿ ಶ್ರಮಿಸಿದರು. ತಮ್ಮ ಪ್ರವಚನವನ್ನು ಸಮುಷ್ಟಿ ಯೋಗಕ್ಕೆ ಹೋಲಿಸಿ ಪ್ರವಚನದಿಂದ ಸಮಾಜೋ ಧಾರ್ಮಿಕ ಪರಿವರ್ತನೆ ಬಯಸಿದ್ದರು ಎಂದರು.