ಬಸವಕಲ್ಯಾಣ (ಬೀದರ್):ನಗರದ ಸಂಚಾರಿ ಪೊಲೀಸ್ ಠಾಣೆ ಹಾಗೂ ಸಿಂಡಿಕೇಟ್ ಬ್ಯಾಂಕ್ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ, ಪೊಲೀಸ್ ಠಾಣೆ ಮತ್ತು ಬ್ಯಾಂಕ್ ಶಾಖೆಯನ್ನು ಸೀಲ್‌ಡೌನ್ ಮಾಡಲಾಗಿದೆ.
ಕಾನ್ಸ್ಟೇಬಲ್ ಸಂಪರ್ಕದಲ್ಲಿದ್ದ ಓರ್ವ ಎಎಸ್‌ಐ ಹಾಗೂ 4 ಸಿಬ್ಬಂದಿಯನ್ನು ಹೊಂ ಕ್ವಾರಂಟೈನ್ ಮಾಡಲಾಗಿದೆ. ಸಂಚಾರಿ ಠಾಣೆಯ ಎಲ್ಲ ಕೆಲಸ ಕಾರ್ಯಗಳನ್ನು ನಗರ ಪೊಲೀಸ್ ಠಾಣೆಗೆ ಶಿಫ್ಟ್ ಮಾಡಲಾಗಿದ್ದು, ಸಾರ್ವಜನಿಕರಲ್ಲಿ ಯಾವುದೇ ದೂರುಗಳಿದ್ದಲ್ಲಿ ನಗರ ಠಾಣೆಗೆ ಸಂಪರ್ಕಿಸಲು ತಿಳಿಸಲಾಗಿದೆ. ಇನ್ನು, ಸಿಂಡಿಕೇಟ್ ಬ್ಯಾಂಕ್‌ನ ಸಿಬ್ಬಂದಿಗೆ ಸೋಂಕು ತಗುಲಿರುವ ಕಾರಣ ಬ್ಯಾಂಕ್ ಶಾಖೆಗೆ ಬೀಗ ಹಾಕಿ, ಸೀಲ್‌ಡೌನ್ ಮಾಡಲಾಗಿದೆ
ಹೊಸದಾಗಿ 10 ಪ್ರಕರಣ ಪತ್ತೆ: ಬಸವಕಲ್ಯಾಣ ನಗರದ 4 ಜನ ಸೇರಿ ತಾಲೂಕಿನಲ್ಲಿ 10 ಜನರಲ್ಲಿ ಸೋಂಕು ಪತ್ತೆಯಾಗಿದೆ. ಹುಲಸೂರ ವ್ಯಾಪ್ತಿ ಸೇರಿ ತಾಲೂಕಿನಲ್ಲಿ ಇದುವರೆಗೆ ಸೋಂಕಿತರ ಸಂಖ್ಯೆ 340ಕ್ಕೆ ತಲುಪಿದ್ದು, ಈ ಪೈಕಿ 289 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. 61 ಸಕ್ರಿಯ ಪ್ರಕರಣಗಳಿವೆ.
ನಗರದ ಶಾಪೂರ ಗಲ್ಲಿಯ 26 ವರ್ಷದ, ತ್ರಿಪುರಾಂತನ 50 ವರ್ಷದ, ನಗರದ ಭೀಮ ನಗರ ಬಡಾವಣೆಯ 36 ವರ್ಷದ ವ್ಯಕ್ತಿ, ಸರ್ವೋದಯ ಕಾಲನಿಯ 31 ವರ್ಷದ ಪುರುಷ, ಲಾಡವಂತಿಯ 30 ವರ್ಷದ ಮಹಿಳೆ, ಬೆಟಬಾಲಕುಂದಾದ 65 ವರ್ಷದ ವೃದ್ದ ಮತ್ತು 38 ವರ್ಷದ ಪುರುಷ, ಹುಲಸೂರದ 48 ವರ್ಷದ ಪುರುಷ, ಕಾಂಬಳೆವಾಡಿಯ 12 ವರ್ಷದ ಬಾಲಕ, ಗೋರ್ಟಾದ 70 ವರ್ಷದ ವೃದ್ಧನಿಗೆ ಸೋಂಕು ದೃಢಪಟ್ಟಿದೆ.