ಬಸವಕಲ್ಯಾಣ: ಮುಂಗಾರು ಬಿತ್ತನೆಗಾಗಿ ರೈತರಿಗೆ ಮಾರಾಟ ಮಾಡಲು ತಾಲೂಕಿನ ಯಲ್ಲದಗುಂಡಿ ಗ್ರಾಮದಲ್ಲಿ ಶೇಖರಿಸಿಟ್ಟಿದ್ದ ನಕಲಿ ರಸಗೊಬ್ಬರ ಅಂಗಡಿಯ ಮೇಲೆ ಕೃಷಿ ಇಲಾಖೆ ಅಧಿಕಾರಿಗಳ ತಂಡ ದಾಳಿ ಮಾಡಿ, ಸುಮಾರು 420 ಬ್ಯಾಗ್ ರಸಗೊಬ್ಬರ ಜಪ್ತಿ ಮಾಡಿಕೊಂಡ ಘಟನೆ ನಡೆದಿದೆ.
ಡಿಎಪಿ ಹೆಸರಿನಲ್ಲಿ ರೈತರಿಗೆ ಮಾರಾಟ ಮಾಡಲು ನಕಲಿ ರಸಗೊಬ್ಬವನ್ನು ದಾಸ್ತಾನು ಮಾಡಿಲಾಗಿತ್ತು. ಇದನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ವ್ಯಕ್ತಿಯೊಬ್ಬರು ಯತ್ನಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ಕೃಷಿ ಇಲಾಖೆ ಅಧಿಕಾರಿಗಳು, ತಕ್ಷಣ ಗ್ರಾಮಕ್ಕೆ ಭೇಟಿನೀಡಿ ಪರಿಶೀಲಿಸಿ ನಕಲಿ ಗೊಬ್ಬರ ಜಪ್ತಿ ಮಾಡಿದ್ದಾರೆ. ಜೊತೆಗೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಸಿದ್ಧತೆ ನಡೆಸಿದ್ದಾರೆಂದು ತಿಳಿದುಬಂದಿದೆ.
ಕೃಷಿ ಇಲಾಖೆ ಅಧಿಕಾರಿಗಳಿಂದ ನಕಲಿ ರಸಗೊಬ್ಬರ ಜಪ್ತಿ ಉಮೇಶ್ ಮಹಾದೇವ ಎನ್ನುವ ಏಜೆಂಟ್‌ರೊಬ್ಬರು ಕಿಸಾನ್ ಗೋಲ್ಡ್ ಎನ್ನುವ ಹೆಸರಿನ ಸೋಯಿಲ್ ಕಂಡಿಷನರ್ ಅನ್ನು ಕಲಬುರ್ಗಿಯ ಭೀಮಾ ಕೃಷ್ಣಾ ಕೆಮಿಕಲ್ಸ್ ಮತ್ತು ಫರ್ಟಿಲಿಸರ್ ಲಿಂ.ನಿಂದ ತರಿಸಿಕೊಂಡು ಯಲ್ಲದಗುಂಡಿ ಗ್ರಾಮದಲ್ಲಿ ಡಿಎಪಿ ಗೊಬ್ಬರ ಎಂದು ರೈತರಿಗೆ ಸುಳ್ಳು ಹೇಳಿ ಮುಂಗಾರು ಬಿತ್ತನೆ ವೇಳೆ ಮಾರಾಟ ಮಾಡಲು ಕಳೆದ ಮೂರು ದಿನಗಳಿಂದ ಗ್ರಾಮದಲ್ಲಿ ಗೊಬ್ಬರ ದಾಸ್ತಾನು ಮಾಡುತಿದ್ದರು ಎಂದು ತಿಳಿದು ಬಂದಿದ್ದು,
ಏಜೆಂಟ್ ವಿರುದ್ಧ ಪ್ರಕರಣ ದಾಖಲಿಸಲು ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೀರಶಟ್ಟಿ ರಾಠೋಡ ತಿಳಿಸಿದ್ದಾರೆ.
ಸುದ್ದಿ ತಿಳಿದ ಶಾಸಕ ಶರಣು ಸಲಗರ್ ಕೂಡ ಸ್ಥಳಕ್ಕೆ ಭೇಟಿನೀಡಿ ಮಾಹಿತಿ ಕಲೆಹಾಕಿದ್ದು, ನಕಲಿ ಗೊಬ್ಬರ ಮಾರಾಟ ಮಾಡಲೆತ್ನಿಸಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮುಂಗಾರು ಹಂಗಾಮಿನ ಬಿತ್ತನೆಯ ತಯಾರಿ ಮಾಡಿಕೊಳ್ಳುವ ಅವಸರದಲ್ಲಿರುವ ರೈತರು ನಕಲಿ ಗೊಬ್ಬರ ಹಾಗೂ ಬೀಜಗಳ ವಿಚಾರದಲ್ಲಿ ಎಚ್ಚರ ವಹಿಸಬೇಕಿದೆ. ರಸಗೊಬ್ಬರ ಹಾಗೂ ಬೀಜಗಳನ್ನು ಖರೀದಿಸಲು ಮಾರುಕಟ್ಟೆಗೆ ಹೋದಾಗ ತಾವು ಕೂಲಂಕುಷವಾಗಿ ಅವುಗಳನ್ನು ಪರಿಶೀಲಿಸಿ ಖರೀದಿಸಬೇಕು ಎಂದು ರೈತರಿಗೆ ಮನವಿ ಮಾಡಿದ್ದಾರೆ.