ಬೀದರ್:ತಾಲೂಕಿನ ಮಂದಕನಳ್ಳಿ ಗ್ರಾಮದಲ್ಲಿ ಏಪ್ರಿಲ್ 19 ರಂದು ಪತ್ತೆಯಾದ ಅಪರಿಚಿತ ಮಹಿಳೆಯ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಕುರಿತು ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಮಾತನಾಡಿ, ಏ.19 ರಂದು ಬೆಳಗಿನ ಜಾವ ಹೊಲಕ್ಕೆ ನೀರು ಬಿಡಲು ಹೋಗಿದ್ದಾಗ ಅಪರಿಚಿತ ಮಹಿಳೆಯ ಶವ ಕಾಣಿಸಿದೆ ಎಂದು ಮಂದಕನಳ್ಳಿ ಗ್ರಾಮದ ರೈತ ನೀಡಿದ್ದರು. ಈ ಮಾಹಿತಿ ಮೇರೆಗೆ ಬಗದಲ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆಗೆ ನಡೆಸಿದ ಬೀದರ್ ಗ್ರಾಮೀಣ ವೃತ್ತ ಸಿಪಿಐ ಶ್ರೀನಿವಾಸ್ ವಿ.ಅಲ್ಲಾಪೂರ ಹಾಗೂ ಬಗದಲ್ ಪಿಎಸ್ಐ ಸುವರ್ಣ ನೇತೃತ್ವದ ಪೊಲೀಸರ ತಂಡ, ಮೃತ ಮಹಿಳೆಯು ತೆಲಂಗಾಣ ರಾಜ್ಯದ ಕಾಮರೆಡ್ಡಿ ಜಿಲ್ಲೆಯ ಮೂಲದವರು ಹಾಗೂ ಮಹಿಳೆಯ ಅಂದಾಜು ವಯಸ್ಸು 35 ರಿಂದ 37ರ ಆಸುಪಾಸು ಇದೆ ಎಂದು ಪತ್ತೆ ಹಚ್ಚಿದ್ದರು ಎಂದರು.
ಮಹಿಳೆ ಹಾಗೂ ಆರೋಪಿ ಇಬ್ಬರ ನಡುವೆ 15 ವರ್ಷಗಳಿಂದ ಅಕ್ರಮ ಸಂಬಂಧ ಇತ್ತು. ಮಹಿಳೆಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳು ಇದ್ದರು. ಅವಳ ಪತಿ ಮೃತನಾಗಿದ್ದ ಮತ್ತು ಮಹಿಳೆಯು ಆರೋಪಿಗೆ ಪದೇ- ಪದೇ ಹಣ ನೀಡುವಂತೆ ಪೀಡಿಸುತ್ತಿದರು. ಆದರಿಂದ ಈ ಕೃತ್ಯ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಆರೋಪಿಯು ಕಬ್ಬು ಕಟಾವು ಮಾಡುವ ವೃತ್ತಿಯಲ್ಲಿ ತೊಡಗಿದ್ದ. ಕೃತ್ಯದ ದಿನ ಮಹಿಳೆಯನ್ನು ಭಾಲ್ಕಿ ತಾಲೂಕಿನ ಮರೂರ ದರ್ಗಾಕ್ಕೆ ಹೋಗೋಣ ಎಂದು ಕರೆತಂದಿದ್ದ. ಮತ್ತೆ ಅಲ್ಲಿಗೆ ಬೇಡ ಮಂದಕನಳ್ಳಿ ದರ್ಗಾಕ್ಕೆ ಹೋಗೋಣ ಎಂದು ಇಲ್ಲಿಗೆ ಕರೆದುಕೊಂಡು ಬಂದಿದ್ದ ಎಂದು ಹೇಳಿದ್ರು.