ಕರ್ನಾಟಕ

karnataka

ETV Bharat / state

ಅಂಬೇಡ್ಕರ್ ಅವರನ್ನು​ ಸಂವಿಧಾನ ರಚನಾ ಸಭೆ ಅಧ್ಯಕ್ಷರಾಗಿಸಿದ್ದು ಕಾಂಗ್ರೆಸ್ : ಮಲ್ಲಿಕಾರ್ಜುನ ಖರ್ಗೆ

ಡಬಲ್ ಇಂಜಿನ್ ಸರ್ಕಾರದಿಂದ ಕರ್ನಾಟಕಕ್ಕೆ ಯಾವುದೇ ಲಾಭ ಆಗಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

By

Published : May 2, 2023, 9:39 PM IST

Updated : May 2, 2023, 9:47 PM IST

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಬೀದರ್ : ಕಾಂಗ್ರೆಸ್‍ ಪಕ್ಷದವರು ಅಂಬೇಡ್ಕರ್ ಅವರಿಗೂ ಅವಮಾನ ಮಾಡಿದ್ದಾರೆ ಎಂದು ಮೋದಿ ಹೋದಲ್ಲೆಲ್ಲಾ ಹೇಳುತ್ತಿದ್ದಾರೆ. ಅಂಬೇಡ್ಕರ್ ಅವರ ಬುದ್ಧಿವಂತಿಕೆಯನ್ನು ನೋಡಿ ಜವಹಾರಲಾಲ್ ನೆಹರು, ಮಹಾತ್ಮಗಾಂಧಿ ಅಂಬೇಡ್ಕರ್ ಅವರನ್ನು ಸಂವಿಧಾನ ರಚನಾ ಸಭೆಯ ಅಧ್ಯಕ್ಷರನ್ನಾಗಿ ಮಾಡಿದ್ದರು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಅಂಬೇಡ್ಕರ್ ಬರೆದ ಸಂವಿಧಾನ ಶ್ರೇಷ್ಠ : ಭಾಲ್ಕಿ, ಬಸವಕಲ್ಯಾಣ, ಹುಮನಾಬಾದ್‍ದಲ್ಲಿ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರನ್ನು ಸಂವಿಧಾನ ರಚನಾ ಸಭೆಯ ಅಧ್ಯಕ್ಷರನ್ನಾಗಿ ಮಾಡಿದ ಸಮಯದಲ್ಲಿ ಜನಸಂಘ, ಬಿಜೆಪಿ ಇರಲಿಲ್ಲ. ಜನಸಂಘ, ಬಿಜೆಪಿಯವರ ಪುಸ್ತಕದಲ್ಲಿ ಅಂಬೇಡ್ಕರ್ ಅವರ ಸಂವಿಧಾನ ಸರಿಯಿಲ್ಲ. ಮನುವಿನ ವಿಚಾರಗಳು ಸಂವಿಧಾನದಲ್ಲಿ ಇಲ್ಲ. ಹೀಗಾಗಿ, ಸಂವಿಧಾನ ಒಪ್ಪುವುದಿಲ್ಲ ಎಂದು ಹೇಳಿದ್ದರು. ಸಂವಿಧಾನ ಜಾತಿ, ಮತ, ಪಂಥ ನೋಡದೆ ಎಲ್ಲರಿಗೂ ಸಮನಾದ ಹಕ್ಕು ನೀಡಿದೆ. ಅಂಬೇಡ್ಕರ್ ಬರೆದ ಸಂವಿಧಾನ ಶ್ರೇಷ್ಠ ಎಂದು ಹೇಳಿದರು.

ಬಿಜೆಪಿಯವರು ವೋಟಿಗಾಗಿ ಅಂಬೇಡ್ಕರ್ ಅವರಿಗೆ ನಮಸ್ಕರಿಸುತ್ತಾರೆ:ಬುದ್ಧ, ಬಸವೇಶ್ವರ, ಅಂಬೇಡ್ಕರ್, ಮಹಾತ್ಮ ಪುಲೆ, ಅವರನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಈ ಮಹಾತ್ಮರು ನಮ್ಮೆಲ್ಲರಿಗೆ ಮನುಷ್ಯರನ್ನಾಗಿ ಮಾಡಿ, ಮನುಷ್ಯರಂತೆ ಬಾಳಲು ಬದುಕಿನ ದಾರಿ ತೋರಿದರು. ಇವರ ತತ್ವಗಳ ಮೇಲೆ ಕಾಂಗ್ರೆಸ್ ಪಕ್ಷ ನಡೆದಿದೆ ಎಂದು ತಿಳಿಸಿದರು. ಆರ್​ಎಸ್​ಎಸ್​, ಬಿಜೆಪಿ ಕಚೇರಿಯಲ್ಲಿ ಅಂಬೇಡ್ಕರ್ ಫೋಟೋ ಇಡುವುದಿಲ್ಲ. ಕೇವಲ ಚುನಾವಣೆ ಬಂದಾಗ ಮಾತ್ರ ಫೋಟೋ ಇಡುತ್ತಾರೆ. ಬಿಜೆಪಿಯವರು ಕೇವಲ ವೋಟಿಗಾಗಿ ಅಂಬೇಡ್ಕರ್ ಅವರನ್ನು ನಮಸ್ಕರಿಸುತ್ತಾರೆ. ಅಂಬೇಡ್ಕರ್ ನಮ್ಮ ಭಾಗ್ಯದಾತ, ನಾವು ಅವರನ್ನು ತಂದೆಯಂತೆ ಪೂಜಿಸುತ್ತೇವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅಂಬೇಡ್ಕರ್ ಅವರ ಮೂರ್ತಿ, ಭಾವಚಿತ್ರಗಳು ಇವೆ. ಮೋದಿ, ಅಮಿತ್ ಶಾ ಅವರ ಕ್ಷೇತ್ರದಲ್ಲಿ ಇವೆಯಾ? ಎಂದು ಖರ್ಗೆ ಪ್ರಶ್ನಿಸಿದರು.

371 ಜೆ ಸ್ಥಾನಮಾನವನ್ನು ಕಲ್ಯಾಣ ಕರ್ನಾಟಕಕ್ಕೆ ನೀಡಲಾಗಿದೆ:ಅಂಬೇಡ್ಕರ್ ಅವರ ಆದರ್ಶ, ತತ್ವಗಳು ಬಿಜೆಪಿಗೆ ಗೊತ್ತಿಲ್ಲ. ಆದರೆ, ನಮಗೆ ಹೇಳಲು ಹೊರಟಿದ್ದಾರೆ. ನಿಮಗೆ ವೋಟ್ ಬೇಕಾದರೆ ತೆಗೆದುಕೊಳ್ಳಿ. ಸುಳ್ಳು ಹೇಳಿ ತೆಗೆದುಕೊಳ್ಳಬೇಡಿ ಎಂದು ಬಿಜೆಪಿಯವರಿಗೆ ಕುಟುಕಿದರು. ಚುನಾವಣೆ ಕರ್ನಾಟಕದ ಭವಿಷ್ಯವನ್ನು ಬದಲಾಯಿಸುವ ಚುನಾವಣೆ ಆಗಿದೆ. ಬಿಜೆಪಿ ಸರ್ಕಾರದಲ್ಲಿ 40 ಪರ್ಸೆಂಟ್​ ಕಮಿಷನ್ ಇಲ್ಲದೆ ಯಾವುದೇ ಕೆಲಸ ಆಗುವುದಿಲ್ಲ. ನನ್ನ ಅವಿರತ ಪ್ರಯತ್ನದಿಂದ ಅಸಾಧ್ಯವಾಗಿದ್ದ 371 ಜೆ ಸ್ಥಾನಮಾನವನ್ನು ಕಲ್ಯಾಣ ಕರ್ನಾಟಕಕ್ಕೆ ನೀಡಲಾಗಿದೆ. ಇಷ್ಟೆಲ್ಲಾ ಕೆಲಸ ಮಾಡಿದವರಿಗೆ ವೋಟು ಕೊಡದೆ ಮೋದಿಗೆ ನೋಡಿ ವೋಟು ಕೊಡುತ್ತೀರಿ ಎಂದರೆ ಏನು ಹೇಳಬೇಕು ಎಂದು ಜನರನ್ನು ಪ್ರಶ್ನಿಸಿದರು.

ಉದ್ದಿಮೆ ಬರಲಿಲ್ಲ, ಉದ್ಯೋಗಗಳು ದೊರಕಲಿಲ್ಲ: ಡಬಲ್ ಎಂಜಿನ್ ಸರ್ಕಾರದಿಂದ ಕರ್ನಾಟಕಕ್ಕೆ ಲಾಭ ಆಗಿಲ್ಲ. ಯಾವುದೇ ದೊಡ್ಡ ಕಾರ್ಖಾನೆ, ಉದ್ದಿಮೆ ಬರಲಿಲ್ಲ. ಉದ್ಯೋಗಗಳು ದೊರಕಲಿಲ್ಲ. 2.58 ಲಕ್ಷ ಖಾಲಿ ಹುದ್ದೆಗಳನ್ನು ಬಿಜೆಪಿ ಸರ್ಕಾರ ತುಂಬಿಲ್ಲ ಎಂದು ದೂರಿದರು. ಕಾಂಗ್ರೆಸ್‍ನ ಐದು ಗ್ಯಾರಂಟಿಗಳನ್ನು ಮೊದಲನೇ ಕ್ಯಾಬಿನೆಟ್‍ನಲ್ಲಿಯೇ ಜಾರಿಗೆ ತರಲಾಗುವುದು. ಮೋದಿ, ಬೊಮ್ಮಾಯಿ ಸುಳ್ಳಿನ ಮಾತಿಗೆ ಮರುಳಾಗಬೇಡಿ. ಮೋದಿ ಅವರು ಗುಜರಾತಿನಲ್ಲಿ ತಮ್ಮ ಹೆಸರಿನ ಮೇಲೆ ಮತ ಕೇಳಿದಂತೆ ನನಗೆ ಕರ್ನಾಟಕದಲ್ಲಿ ಮತ ಕೇಳಲು ಹಕ್ಕಿದೆ. ನೀವು ಯಾಕೆ ರಾಜ್ಯಕ್ಕೆ ಕಾಲಿಡುತ್ತಿದ್ದೀರಿ? ಎಂದು ಮೋದಿ ಅವರನ್ನು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಈಶ್ವರ ಖಂಡ್ರೆ ಮಾತನಾಡಿದರು. ಎಐಸಿಸಿ ಕಾರ್ಯದರ್ಶಿ ಶ್ರೀಹರಿಬಾಬು, ತೆಲಂಗಾಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರೇವಂತರೆಡ್ಡಿ, ಹರಿಯಾಣದ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಉದಯಭಾನು, ಭೀಮಸೇನರಾವ್ ಶಿಂಧೆ, ಜಿಲ್ಲಾ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಎಂಎಲ್‍ಸಿ ಅರವಿಂದ ಅರಳಿ, ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ಸುರೇಶ ಶೆಟಕಾರ್, ಮೀನಾಕ್ಷಿ ಸಂಗ್ರಾಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದತ್ತಾತ್ರಿ ಮೂಲಗೆ, ಮಲ್ಲಿಕಾರ್ಜುನ ಪಾಟೀಲ ಮುಗನೂರ, ಪ್ರಕಾಶ ಮಾಶೆಟ್ಟೆ ಇದ್ದರು. ದೀಪಕ ಠಮಕೆ, ನಿರೂಪಿಸಿ, ವಂದಿಸಿದರು.

ಇದನ್ನೂ ಓದಿ:ಬಜರಂಗದಳ ನಮ್ಮ ಸಂಸ್ಕೃತಿ, ಅವ್ರು ಧರ್ಮ ರಕ್ಷಣೆ ಮಾಡುವವರು: ಸಿಎಂ ಬೊಮ್ಮಾಯಿ

Last Updated : May 2, 2023, 9:47 PM IST

ABOUT THE AUTHOR

...view details