ಬೀದರ್ :ಭಾರತೀಯ ಸೇನೆಯ ವಿವಿಧ ಹುದ್ದೆಗಳಿಗೆ ನಡೆದ 18 ದಿನಗಳ ಬೃಹತ್ ನೇಮಕಾತಿ ರ್‍ಯಾಲಿಯಲ್ಲಿ 46,442 ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಇವರಲ್ಲಿ 3,007 ಯುವಕರು ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಲಿಖಿತ ಪರೀಕ್ಷೆಗೆ ಅರ್ಹತೆ ಹೊಂದಿದ್ದಾರೆ.
ನಗರದ ನೆಹರು ಕ್ರೀಡಾಂಗಣದಲ್ಲಿ ಡಿ.5ರಂದು ಆರಂಭಗೊಂಡಿದ್ದ ನೇಮಕಾತಿ ರ್‍ಯಾಲಿ ಡಿ. 22ರವರೆಗೆ ನಡೆದಿತ್ತು. ಅಗ್ನಿಪಥ ಯೋಜನೆಯಡಿಯಲ್ಲಿ ಬೆಳಗಾವಿ ವಲಯ ಸೇನಾ ನೇಮಕಾತಿ ವಿಭಾಗ ಭರ್ತಿ ಪ್ರಕ್ರಿಯೆ ಕೈಗೊಂಡಿತ್ತು. ಸೇನೆಯ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬೀದರ್, ಕಲಬುರಗಿ, ಯಾದಗಿರಿ, ಬೆಳಗಾವಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಿಂದ ಒಟ್ಟು 70,375 ಅಭ್ಯರ್ಥಿಗಳು ನೇಮಕಾತಿಗೆ ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ 46,442 ಅಭ್ಯರ್ಥಿಗಳು ದೈಹಿಕ ಹಾಗೂ ವೈದ್ಯಕೀಯ ಪರೀಕ್ಷೆಗೆ ಹಾಜರಾಗಿ, ಇದರಲ್ಲಿ 3007 ಯುವಕರು ಉತ್ತೀರ್ಣರಾಗಿ ಲಿಖಿತ ಪರೀಕ್ಷೆಗೆ ಅರ್ಹತೆ ಹೊಂದಿದ್ದಾರೆ. ರ್‍ಯಾಲಿಗೆ ನೋಂದಣಿಯಾಗಿದ್ದವರ ಪೈಕಿ 23,933 ಅಭ್ಯರ್ಥಿಗಳು ಗೈರು ಹಾಜರಾಗಿದ್ದರು.
ಬೆಳಗಾವಿ ಜಿಲ್ಲೆಯ 2240, ಬೀದರ್ 104, ಕೊಪ್ಪಳ 158, ರಾಯಚೂರು 70, ಕಲಬುರಗಿ 180 ಹಾಗೂ ಯಾದಗಿರಿ-ಬೆಳಗಾವಿ 255 ಅಭ್ಯರ್ಥಿಗಳು ಲಿಖಿತ ಪರೀಕ್ಷೆಗೆ ಅರ್ಹತೆ ಹೊಂದಿದ್ದಾರೆ. ಬೆಳಗಾವಿ ಕರ್ನಲ್ ಎಆರ್ಓ ನಿಶಾಂತ್ ಶೆಟ್ಟಿ ನೇತೃತ್ವದಲ್ಲಿ 25 ಹಿರಿಯ ಅಧಿಕಾರಿಗಳು, 150 ಸಿಬ್ಬಂದಿ ರ್‍ಯಾಲಿಯಲ್ಲಿ ಪಾಲ್ಗೊಂಡು ಪ್ರಕ್ರಿಯೆ ನಡೆಸಿಕೊಟ್ಟರು.
ಬೆಳಗಾವಿ ವಲಯದ ಸೇನಾ ನೇಮಕಾತಿ ಘಟಕದಿಂದ ಭರ್ತಿ ಪ್ರಕ್ರಿಯೆ ನಡೆಯಿತು. ಇದಕ್ಕೆ ಜಿಲ್ಲಾಡಳಿತ ಸಾತ್ ನೀಡಿತ್ತು. ನೇಮಕಾತಿಗೆ ಪ್ರತಿ ದಿನ 4 ರಿಂದ 5 ಸಾವಿರ ಅಭ್ಯರ್ಥಿಗಳು ಭಾಗವಹಿಸಿದ್ದರು. ಈ ವೇಳೆ ಯಾವುದೇ ಗದ್ದಲ, ಗಲಾಟೆ ಆಗದಂತೆ ಮುಂಜಾಗ್ರತೆ ಕ್ರಮ ವಹಿಸಲಾಗಿತ್ತು. ಅಭ್ಯರ್ಥಿಗಳಿಗೆ ಪ್ರವೇಶಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ವ್ಯವಸ್ಥೆ ಕಲ್ಪಿಸಿದ್ದರು. ಕುಡಿಯುವ ನೀರು, ಶೌಚಗೃಹ ಸೇರಿ ಇತರ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು.
ಬೆಳಗಾವಿ ಯುವಕರ ಮೇಲುಗೈ: ಭಾರತೀಯ ಸೇನೆಯಲ್ಲಿ ಸಾಮಾನ್ಯ ಸೈನಿಕ, ತಾಂತ್ರಿಕ ಹುದ್ದೆ, ಕ್ಲರ್ಕ್, ಹೌಸ್ ಕೀಪರ್, ಬಾರಬಾರ್, ಕುಕ್ ಇತರ ಹುದ್ದೆಗಳ ನೇಮಕಾತಿಗೆ ಕಲ್ಯಾಣ ಕರ್ನಾಟಕ ಭಾಗದ ಬೀದರ್, ರಾಯಚೂರು, ಕೊಪ್ಪಳ, ಕಲಬುರಗಿ, ಯಾದಗಿರಿ ಹಾಗೂ ಬೆಳಗಾವಿ ಜಿಲ್ಲೆಯ ಅಭ್ಯರ್ಥಿಗಳಿಗೆ ನೇಮಕಾತಿ ರ್‍ಯಾಲಿ ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ಆನ್‍ಲೈನ್ ಮೂಲಕ ಅರ್ಜಿ ಕರೆಯಲಾಗಿತ್ತು. ಒಟ್ಟು 70,375 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಸೈನಿಕ ಹುದ್ದೆಗೆ ಬೆಳಗಾವಿ ಜಿಲ್ಲೆಯಿಂದ 50,646, ಕಲಬುರಗಿ 3856, ಕೊಪ್ಪಳ 3349, ಬೀದರ್ 2772, ರಾಯಚೂರು 2049, ಯಾದಗಿರಿ 1153 ಹಾಗೂ ಕ್ಲರ್ಕ್ ಸೇರಿ ಇತರ ಹುದ್ದೆಗಳಿಗೆ 6550 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ರ್‍ಯಾಲಿಯಲ್ಲಿ ಬೆಳಗಾವಿ ಜಿಲ್ಲೆಯಿಂದ ಅಧಿಕ ಸಂಖ್ಯೆಯಲ್ಲಿ ನೋಂದಣಿಯಾಗಿದ್ದರು. ದೈಹಿಕ-ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಲಿಖಿತ ಪರೀಕ್ಷೆಗೂ ಬೆಳಗಾವಿಯಿಂದ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಜಿಲ್ಲಾಡಳಿತದಿಂದ ವಸತಿ, ಊಟ ವ್ಯವಸ್ಥೆ: ಹೊರ ಜಿಲ್ಲೆಗಳಿಂದ ಆಗಮಿಸಿದ್ದ ಅಭ್ಯರ್ಥಿಗಳಿಗೆ ಜಿಲ್ಲಾಡಳಿತ ಊಟ, ವಸತಿ ವ್ಯವಸ್ಥೆ ಮಾಡಿತ್ತು. ಸೇನಾ ನೇಮಕಾತಿ ಆರಂಭದಿಂದ ಕೊನೆಯವರೆಗೆ ಇಲ್ಲಿನ ಗುರುದ್ವಾರದ ಪರಿಸರದಲ್ಲಿ ಸೌಲಭ್ಯ ಕಲ್ಪಿಸಲಾಗಿತ್ತು. ಜಿಲ್ಲಾಡಳಿತ ಜತೆಯಲ್ಲಿ ಇತರ ಸಂಘ-ಸಂಸ್ಥೆಗಳು ನೆರವು ನೀಡಿದ್ದವು. ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಸಾಯಿ ಶಾಲೆ ಆವರಣದಲ್ಲಿ ಊಟ, ವಸತಿ ವ್ಯವಸ್ಥೆ ಮಾಡಿತ್ತು. ನಿತ್ಯವೂ ವಿವಿಧ ಸಂಘಟನೆಗಳಿಂದ ಆಹಾರ ವಿತರಣೆಗಳು ನಡೆದವು.
ಇದನ್ನೂ ಓದಿ:ಬೀದರ್: ಅಗ್ನಿವೀರ್ ನೇಮಕಾತಿ ರ್‍ಯಾಲಿಗೆ ಭೇಟಿ ನೀಡಿದ ಸಚಿವ ಪ್ರಭು ಬಿ ಚವ್ಹಾಣ