ಬೀದರ್: ಸೋಮವಾರದಿಂದ ಜಿಲ್ಲೆಯಲ್ಲಿ ಸೇನಾ ಭರ್ತಿ ರ‍್ಯಾಲಿ ನಗರದ ನೆಹರೂ ಜಿಲ್ಲಾ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಜಿಲ್ಲಾಡಳಿತದ ವತಿಯಿಂದ ಬ್ಯಾರಿಕೇಡ್, ಶ್ಯಾಮಿಯಾನ, ಕುಡಿಯುವ ನೀರು ಮತ್ತು ಶೌಚಾಲಯ ವ್ಯವಸ್ಥೆ ಹಾಗೂ ಸೇನಾ ನೇಮಕಾತಿ ರ‍್ಯಾಲಿಗೆ ಬೇಕಾಗುವ ಎಲ್ಲಾ ಅಗತ್ಯ ಸೌಕರ್ಯಗಳು ಮಾಡಲಾಗಿದೆ.
ಅಭ್ಯರ್ಥಿಗಳ ದಾಖಲಾತಿಗಳ ಪರಿಶೀಲನೆಗಾಗಿ ಶಿಕ್ಷಣ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ ಮತ್ತು ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಆರೋಗ್ಯ ಇಲಾಖೆ ಸಿಬ್ಬಂದಿಯನ್ನು ಸಹ ನಿಯೋಜನೆ ಮಾಡಲಾಗಿದೆ.
ವಿವಿಧ ಇಲಾಖೆಗಳಿಂದ ನೆರವು: ನಗರಸಭೆ, ಲೋಕೋಪಯೋಗಿ ಇಲಾಖೆ, ಕ್ರೀಡಾ ಇಲಾಖೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಶಿಕ್ಷಣ ಇಲಾಖೆ ಮತ್ತು ಸೈನಿಕ ಕಲ್ಯಾಣ ಇಲಾಖೆಗಳು ಈ ಸೇನಾ ನೇಮಕಾತಿ ರ‍್ಯಾಲಿಗೆ ಸಹಕಾರ ನೀಡಲಿವೆ. ಗುರುದ್ವಾರದ ವತಿಯಿಂದ ರ‍್ಯಾಲಿಗೆ ಬರುವ ಅಭ್ಯರ್ಥಿಗಳಿಗಾಗಿ ಉಚಿತ ಊಟದ ವ್ಯವಸ್ಥೆ ಮತ್ತು ಕಡಿಮೆ ವೆಚ್ಚದಲ್ಲಿ ಅವರಿಗೆ ವಸತಿಯನ್ನು ಕಲ್ಪಿಸಲಾಗುತ್ತಿದೆ.