ಬೆಂಗಳೂರು: ಬೀದರ್ ಜಿಲ್ಲೆಯ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಲಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಈಶ್ವರ ಖಂಡ್ರೆಯವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೀದರ್ ಜಿಲ್ಲೆಯ 3 ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಆರ್ಥಿಕ ಇಲಾಖೆಯ ಸಹಮತಿ ಪಡೆದು ಪ್ರಯತ್ನಿಸಲಾಗುವುದು ಎಂದರು.
ನೀರಾವರಿ ಇಲಾಖೆಯು ಸಿದ್ಧಪಡಿಸಿದ ವಿಸ್ತೃತ ಯೋಜನಾ ವರದಿಯಂತೆ 647 ಕೋಟಿ ರೂ. ಅಂದಾಜು ಮಾಡಲಾಗಿತ್ತು. 2019-20ನೇ ಸಾಲಿನ ಮುಂಗಡ ಪತ್ರದಲ್ಲಿ ಬಸವಕಲ್ಯಾಣ ಮತ್ತು ಭಾಲ್ಕಿ ತಾಲೂಕಿನ ಜಮೀನುಗಳಿಗೆ ನೀರಾವರಿ ಒದಗಿಸುವ ಹಾಗೂ ಕೆರೆ ತುಂಬಿಸುವ ಬೀದರ್ ನಗರ ವ್ಯಾಪ್ತಿಯಲ್ಲಿ ಬರುವ ಕೆರೆಗಳನ್ನು ಮಾಂಜ್ರಾ ನದಿಯಿಂದ ನೀರು ತುಂಬಿಸುವ ಮತ್ತು ಕಾರಂಜಾ ಎಡದಂಡೆ ಮತ್ತು ಬಲದಂಡೆ ಯೋಜನೆಗಳಿಗೆ ತಲಾ 75 ಕೋಟಿ ರೂ. ಅನುದಾನ ನೀಡಿ ಸಾಂಕೇತಿಕವಾಗಿ ಘೋಷಣೆ ಮಾಡಲಾಗಿತ್ತು ಎಂದು ಸಚಿವರು ತಿಳಿಸಿದರು.