ಕರ್ನಾಟಕ

karnataka

ETV Bharat / state

5 ಸಾವಿರ ರೂಪಾಯಿ ಲಂಚಕ್ಕೆ 5 ವರ್ಷ ಜೈಲು, ಒಂದೂವರೆ ಲಕ್ಷ ರೂ. ದಂಡ.. - ಬೀದರ್​ ಡಿಸಿ ಕಚೇರಿಯ ಎಫ್​ಡಿಎಗೆ ತಕ್ಕ ಶಾಸ್ತಿ

ಐದು ಸಾವಿರ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪ್ರಥಮ ದರ್ಜೆ ಸಹಾಯಕಗೆ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

ಲೋಕಾಯುಕ್ತ ಪ್ರಕರಣ
ಲೋಕಾಯುಕ್ತ ಪ್ರಕರಣ

By

Published : Jul 22, 2023, 7:16 AM IST

Updated : Jul 22, 2023, 10:21 AM IST

ಬೀದರ್: ಐದು ಸಾವಿರ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಸೋಮಶೇಖರ ಪಾಟೀಲ್​ಗೆ ಇಲ್ಲಿನ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯವು 5 ವರ್ಷ ಜೈಲು ಶಿಕ್ಷೆ ಹಾಗೂ 1.50 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ. ಐದು ಸಾವಿರ ಲಂಚದ ಬೇಡಿಕೆ ಇಟ್ಟಿದ್ದಕ್ಕೆ ಇದೀಗ ಸೋಮಶೇಖರ ಐದು ವರ್ಷದ ಜೈಲು ಶಿಕ್ಷೆ ಅನುಭವಿಸಬೇಕಾಗಿದೆ. ವಿಶೇಷ ನ್ಯಾಯಾಲಯದ ನ್ಯಾಯಾಧೀಶ ವಿಜಯಕುಮಾರ ಆನಂದಶೆಟ್ಟಿ ಅವರು ಗುರುವಾರ ಶಿಕ್ಷೆ ಪ್ರಕಟಿಸಿದರು.

ಇಲ್ಲಿನ ಗುರುನಾನಕ್ ಬಡಾವಣೆಯ ಈಶ್ವರಿ ಅವರ ಹೆಸರಿನಲ್ಲಿರುವ ಬೀದರ್ ತಾಲೂಕಿನ ಹಮೀಲಾಪುರ ಗ್ರಾಮದ 4.20 ಎಕರೆ ಜಮೀನನ್ನು ಜಿಲ್ಲಾಧಿಕಾರಿ ಅವರು ಭೂಪರಿವರ್ತನೆ ಆದೇಶ ಮಾಡಿದ್ದರು. ಇದನ್ನು ಸಂಬಂಧಪಟ್ಟ ಕಚೇರಿಗಳಿಗೆ ಆದೇಶದ ಪ್ರತಿ ಡಿಸ್ಪ್ಯಾಚ್ ಮಾಡಲು ಸೋಮಶೇಖರ ಪಾಟೀಲ್ 5 ಸಾವಿರ ರೂ.ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಈಶ್ವರಿ ಅವರ ಪತಿ ವೀರಶಟ್ಟಿ ಕುಂಚಿಗೆ ಅವರಿಂದ 2012ರ ಆ.28ರಂದು ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರು ನಡೆಸಿದ ದಾಳಿಯಲ್ಲಿ ಸೋಮಶೇಖರ ಸಿಕ್ಕಿಬಿದ್ದಿದ್ದ. ಈ ಕುರಿತು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಪೊಲೀಸ್ ನಿರೀಕ್ಷಕ ಭಾಸು ಚವ್ಹಾಣ್ ತನಿಖೆ ನಡೆಸಿ, ದೋಷಾರೋಪಣೆ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿ ವಿರುದ್ಧದ ಆರೋಪಗಳು ಸಾಬೀತು ಆಗಿದ್ದರಿಂದ ಆದೇಶ ನೀಡಿ, ಐದು ವರ್ಷ ಜೈಲು ಶಿಕ್ಷೆ ಹಾಗೂ 1.50 ಲಕ್ಷ ರೂ. ದಂಡ ವಿಧಿಸಿದರು. ದಂಡ ಭರಿಸಲು ತಪ್ಪಿದಲ್ಲಿ ಹೆಚ್ಚುವರಿಯಾಗಿ 6 ತಿಂಗಳ ಜೈಲು ಶಿಕ್ಷೆ ವಿಧಿಸಲು ಆದೇಶ ನೀಡಿದರು. ಲೋಕಾಯುಕ್ತ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೇಶವರಾವ ಶ್ರೀಮಾಳೆ ವಾದ ಮಂಡಿಸಿದ್ದರು.

ಬಾಕ್ಸ್ ದೂರುದಾರ ವಿರುದ್ಧ ಕೇಸ್: ಲಂಚ ಸ್ವೀಕಾರ ಪ್ರಕರಣದ ದೂರುದಾರ ವೀರಶೆಟ್ಟಿ ಪ್ರಭುಶೆಟ್ಟಿ ಕುಂಚಿಗೆ ವಿರುದ್ಧವೇ ದೂರು ದಾಖಲಿಸಲು ಕೋರ್ಟ್​ ಆದೇಶಿಸಿದೆ. ದೂರಿನ ವಿರುದ್ಧ ವೀರಶೆಟ್ಟಿ ಸುಳ್ಳು ಸಾಕ್ಷಿ ನೀಡಿದ್ದರಿಂದ ಪ್ರತ್ಯೇಕ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ನ್ಯಾಯಾಧೀಶ ವಿಜಯಕುಮಾರ ಆನಂದಶೆಟ್ಟಿ ಅವರು ಆದೇಶ ನೀಡಿದ್ದಾರೆ.

ಹಾವೇರಿಯಲ್ಲಿ ಲೋಕಾಯುಕ್ತ ದಾಳಿ :ಡಿಡಿಪಿಐ ಕಚೇರಿಯಲ್ಲಿ ಶುಕ್ರವಾರ ನಿವೃತ್ತ ಶಿಕ್ಷಕನಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹಾಗೂ ಎಸ್​ಡಿಎ ಸಿಬ್ಬಂದಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಹಾವೇರಿ ಜಿಲ್ಲಾ ಡಿಡಿಪಿಐ ಅಂದಾನೆಪ್ಪ ವಡಗೇರಿ ಮತ್ತು ದ್ವಿತೀಯ ದರ್ಜೆ ಸಹಾಯಕ ದತ್ತಾತ್ರೇಯ ಕುಂಠೆ 7 ಸಾವಿರ ರೂ. ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ನಿವೃತ್ತ ಶಿಕ್ಷಕ ಮೊಹಮ್ಮದ ಜಾಫರ್ ಲೋದಿ ಎಂಬುವರ ಬಳಿ ಲಂಚವನ್ನು ಪಡೆಯುತ್ತಿದ್ದ ವೇಳೆ ಈ ದಾಳಿ ನಡೆದಿದೆ.

ಇದನ್ನೂ ಓದಿ:ಲೋಕಾಯುಕ್ತ ಬಲೆಗೆ ಡಿಡಿಪಿಐ, ಎಸ್​ಡಿಎ: ನಿವೃತ್ತ ಶಿಕ್ಷಕನಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ

Last Updated : Jul 22, 2023, 10:21 AM IST

ABOUT THE AUTHOR

...view details