ಬೀದರ್: ಬಡ ಪ್ರತಿಭಾವಂತ ವಿದ್ಯಾರ್ಥಿಯೊಬ್ಬ ವೈದ್ಯನಾಗುವ ಕನಸು ಕಂಡು ನೀಟ್ ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆಯುವ ಮೂಲಕ ಸರ್ಕಾರಿ ಮೆಡಿಕಲ್ ಸೀಟ್ ಗಿಟ್ಟಿಸಿಕೊಂಡಿದ್ದಾರೆ. ಆದರೆ ಕಡುಬಡತನ ವಿದ್ಯಾರ್ಥಿಯ ವ್ಯಾಸಂಗಕ್ಕೆ ಅಡ್ಡಿಯಾಗಿದೆ. ತಮ್ಮ ಮುಂದಿನ ವಿದ್ಯಾಭ್ಯಾಸ ಮುಂದುವರಿಸಲು ಉತ್ಸುಕನಾಗಿರುವ ಈ ವಿದ್ಯಾರ್ಥಿ ಸಹೃದಯಿಗಳಿಂದ ನೆರವು ಕೋರಿದ್ದಾರೆ.
ಜಿಲ್ಲೆಯ ಔರಾದ್ ತಾಲೂಕಿನ ವಡಗಾಂವ್ ಗ್ರಾಮದ ನಿವಾಸಿ ಮೊಹಮ್ಮದ್ ಖದೀರ್ ಈ ಸಾಧನೆಗೈದಿರುವ ಪ್ರತಿಭಾವಂತ ವಿದ್ಯಾರ್ಥಿ. ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಪಡೆದ ಖದೀರ್, ನಂತರ ಬೀದರ್ ನ ಶಾಹಿನ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣವನ್ನು ಪಡೆದರು. ಪಿಯುಸಿಯಲ್ಲಿ ಶೇ. 82.96 ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದರು. ಸದ್ಯ ನೀಟ್ ಪರೀಕ್ಷೆಯಲ್ಲಿ 85158 ರ್‍ಯಾಂಕ್ ಪಡೆಯುವ ಮೂಲಕ ಯಾದಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸರ್ಕಾರಿ ಕೋಟಾದಡಿ ಮೆಡಿಕಲ್ ಸೀಟ್ ಪಡೆದಿದ್ದಾರೆ.
ವಿದ್ಯಾರ್ಥಿಯ ವ್ಯಾಸಂಗಕ್ಕೆ ಬಡತನ ಅಡ್ಡಿ : ಆದರೆ, ಮನೆಯಲ್ಲಿನ ಕಡು ಬಡತನ ಈ ವಿದ್ಯಾರ್ಥಿಯ ಓದಿಗೆ ಅಡ್ಡಿಯಾಗಿದೆ. ಇಲ್ಲಿನ ಸರ್ಕಾರಿ ಶುಲ್ಕ ಪಾವತಿಸಲು ಆಗದೆ ಕುಟುಂಬ ಪರದಾಡುವಂತಾಗಿದೆ. ಇನ್ನು, ವಿದ್ಯಾರ್ಥಿಯ ತಂದೆ ಮಹಮ್ಮದ್ ಗುಡುಮಿಯಾ ರೈತರಾಗಿದ್ದು, ಇಷ್ಟು ಹಣ ಹೊಂದಿಸಲು ನನ್ನಿಂದ ಕಷ್ಟ ಸಾಧ್ಯ. ಇಬ್ಬರು ಹೆಣ್ಣುಮಕ್ಕಳು ಮತ್ತು ಇಬ್ಬರು ಗಂಡುಮಕ್ಕಳಿದ್ದಾರೆ. ಈ ಪೈಕಿ ಮೂವರು ಶಿಕ್ಷಣ ಪಡೆಯುತ್ತಿದ್ದಾರೆ.