ಬಸವಕಲ್ಯಾಣ:ರಸ್ತೆ ಮೇಲೆ ಅಲೆಯುತ್ತಿದ್ದ ಮಾನಸಿಕ ಅಸ್ವಸ್ಥರಿಗೆ ಸ್ನಾನ ಮಾಡಿಸಿ, ಹೊಸ ಬಟ್ಟೆಗಳನ್ನು ತೊಡಿಸುವ ಮೂಲಕ ಇಲ್ಲಿಯ ನಗರಸಭೆ ಅಧಿಕಾರಿಗಳು ಮಾನವೀಯತೆ ಮೆರೆಯುವ ಜೊತೆಗೆ ದೀಪಾವಳಿ ಹಬ್ಬದ ವೇಳೆ ಮಾನಸಿಕ ಅಸ್ವಸ್ಥರ ಬಾಳಲ್ಲಿ ಬೆಳಕು ಮೂಡಿಸಿದ ಪ್ರಸಂಗ ಜರುಗಿದೆ.
ಮಾನಸಿಕ ಅಸ್ವಸ್ಥರಿಗೆ ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸುವ ಮೂಲಕ ಅವರ ಬಾಳಲ್ಲಿ ಬೆಳಕು ಮೂಡಿಸಿದ ನಗರಸಭೆ ಅಧಿಕಾರಿಗಳ ತಂಡ ಹೌದು, ಅದೇಷ್ಟೋ ತಿಂಗಳುಗಳಿಂದ ಸ್ನಾನ ಮಾಡದೇ ಹೊಲಸು ಬಟ್ಟೆ ಧರಿಸಿ ರಸ್ತೆ ಮೇಲೆ ಓಡಾಡುತಿದ್ದ ಮಾನಸಿಕ ಅಸ್ವಸ್ಥರ ಮೇಲೆ ಕರುಣೆ ತೋರಿದ ಇಲ್ಲಿಯ ನಗರಸಭೆ ಪೌರಾಯುಕ್ತ ಗೌತಮ್ ಕಾಂಬಳೆ ಹಾಗೂ ನೈರ್ಮಲ್ಯ ನಿರೀಕ್ಷಕ ಅಶ್ವಿನ್ ಕಾಂಬಳೆ ನೇತೃತ್ವದ ಅಧಿಕಾರಿ ಹಾಗೂ ಪೌರ ಕಾರ್ಮಿಕರ ತಂಡ, ನಗರದ ರಸ್ತೆಯಲ್ಲಿ ಓಡಾಡುತಿದ್ದ ಓರ್ವ ಮಹಿಳೆ ಹಾಗೂ ಓರ್ವ ಪುರುಷ ಮಾನಸಿಕ ಅಸ್ವಸ್ಥರನ್ನು ಹಿಡಿದು ಅವರಿಗೆ ಸ್ನಾನ ಮಾಡಿಸುವ ಜೊತೆಗೆ ಹೊಸ ಬಟ್ಟೆಗಳನ್ನು ತೊಡಿಸುವ ಮೂಲಕ ಜನ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ದೀಪಾವಳಿ ಹಬ್ಬದ ನಿಮಿತ್ತ ಪ್ರತಿಯೊಬ್ಬರು ಹೊಸ ಬಟ್ಟೆಗಳನ್ನು ಖರೀದಿಸಿ ಧರಿಸುತ್ತಾರೆ. ಆದರೆ ನಮ್ಮಂತೆಯೇ ಮನುಷ್ಯರಾಗಿರುವ ಮಾನಸಿಕ ಅಸ್ವಸ್ಥರು ಕೂಡ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೊಳಕು ಬಟ್ಟೆ ಧರಿಸದೆ, ಹೊಸ ಬಟ್ಟೆಗಳನ್ನು ಧರಿಸಿ ಓಡಾಡಬೇಕು ಎನ್ನುವ ಉದ್ದೇಶದಿಂದ ನಗರದಲ್ಲಿಯ ಮಾನಸಿಕ ಅಸ್ವಸ್ಥರಿಗೆ ಸ್ನಾನ ಮಾಡಿಸಿ ಹೊಸ ಬಟ್ಟೆ ತೊಡಿಸಬೇಕು ಎಂದು ನಿರ್ಧರಿಸಲಾಗಿದೆ.
ಗುರುವಾರ ಓರ್ವ ಮಹಿಳೆ ಮತ್ತು ಓರ್ವ ಪುರುಷ ಮಾನಸಿಕ ಅಸ್ವಸ್ಥರಿಗೆ ಹಿಡಿದು ಅವರ ತಲೆಗೂದಲು ಕಟ್ ಮಾಡುವ ಜೊತೆಗೆ ಸ್ನಾನ ಮಾಡಿಸಿ, ಹೊಸ ಪ್ಯಾಂಟ್, ಶರ್ಟ್, ಒಳಉಡುಪು ಹಾಗೂ ಮಹಿಳೆಗೆ ಸೀರೆ ತೊಡಿಸಲಾಗಿದೆ. ಚಳಿಗಾಲ ಆರಂಭವಾಗಿರುವ ಕಾರಣ ಅವರಿಗೆ ಸ್ವೇಟರ್ ಕೂಡ ತೊಡಿಸಲಾಗಿದೆ. ಇದೇ ರೀತಿ ಉಳಿದ ಮಾನಸಿಕ ಅಸ್ವಸ್ಥರಿಗೂ ಹಿಡಿದು ಬಟ್ಟೆ ತೊಡಿಸಲು ನಿರ್ಧರಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತ ಗೌತಮ್ ಕಾಂಬಳೆ ತಿಳಿಸಿದ್ದಾರೆ.