ಬಸವಕಲ್ಯಾಣ: ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ನಮ್ಮೊಂದಿಗೆ ಕೈ ಜೋಡಿಸಿ ಎಂದು ಲಿಂಗಾಯತ ಧರ್ಮ ಹೋರಾಟಗಾರರು ಮುಸ್ಲಿಂ ಧರ್ಮದ ಮುಖಂಡರಲ್ಲಿ ಮನವಿ ಮಾಡಿದರು.
ಬಸವಕಲ್ಯಾಣದ ಬಸವ ಮಹಾಮನೆ ಪರಿಸರದಲ್ಲಿ ನಡೆದ ಕಲ್ಯಾಣ ಪರ್ವದ ಸಮಾರೋಪ ಸಮಾರಂಭದಲ್ಲಿ ಈ ಕೂಗು ಕೇಳಿ ಬಂದಿತು. ಇದೇ ವೇಳೆ ಪಥ ಸಂಚಲನ ನಡೆಯಿತು. ಬಳಿಕ ಧರ್ಮದ ಪ್ರಮುಖರ ತಂಡವೊಂದು ಜಾಮೀಯಾ ಮಸೀದಿಗೆ ತೆರಳಿ ದರ್ಶನ ಪಡೆದುಕೊಂಡರು. ಅಲ್ಲಿದ್ದ ಮುಸ್ಲಿಂ ಬಾಂಧವರಲ್ಲಿ ಹೋರಾಟಕ್ಕೆ ಸೂಚಿಸಿ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಕೇಳಿಕೊಂಡರು.
ಮಸೀದಿಗೆ ಭೇಟಿ ನೀಡಿದ ಲಿಂಗಾಯತ ಹೋರಾಟಗಾರರು.. ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ಬಸವ ತತ್ವ ಹಾಗೂ ಮುಸ್ಲಿಂ ಧರ್ಮದ ಪವಿತ್ರ ಕುರಾನ್‌ನಲ್ಲಿಯ ತತ್ವ ಸಂದೇಶಗಳಿಗೆ ಸಾಮ್ಯತೆ ಇದೆ. ಮೂಢನಂಬಿಕೆ, ಕಂದಾಚಾರ, ಮೂರ್ತಿ ಪೂಜೆಗೆ ವಚನ ಸಾಹಿತ್ಯ ಹಾಗೂ ಕುರಾನ್‌ನಲ್ಲಿ ಅವಕಾಶ ಇಲ್ಲ. ಹೀಗಾಗಿ ಈ ಎರಡು ಧರ್ಮಗಳ ಆಚಾರ, ವಿಚಾರಗಳಿಗೆ ಸಾಮ್ಯತೆ ಇದೆ. ನಮ್ಮೊಂದಿಗೆ ನೀವು ಕೈಜೋಡಿಸಿ ಹೋರಾಟಕ್ಕೆ ಬಲ ತುಂಬಬೇಕು ಎಂದರು.
ಜಮಾತೆ ಇಸ್ಲಾಮಿ ಹಿಂದ್‌ನ ಸ್ಥಳೀಯ ಅಧ್ಯಕ್ಷ ಕಲೀಮ್ ಅವರು ಮಸೀದಿಗೆ ಭೇಟಿ ಕೊಟ್ಟವರಿಗೆ ಮುಸ್ಲಿಂ ಧರ್ಮದ ಆಚಾರ, ವಿಚಾರಗಳನ್ನು ಪರಿಚಯಿಸಿದರು.