ಬೀದರ್: ನವಜಾತ ಶಿಶುವಿಗೆ ಇಲಿ ಕಡಿದಿರುವ ಘಟನೆ ಇಲ್ಲಿನ ಬ್ರಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಪೋಷಕರು ಕಣ್ಣೀರಿಡುವ ಸ್ಥಿತಿ ನಿರ್ಮಾಣವಾಗಿದೆ.
ಮಗುವಿನ ದೇಹದ ಹಲವು ಭಾಗಗಳಲ್ಲಿ ಇಲಿ ಕಡಿತದಿಂದ ನೀಲಿ ಬಣಕ್ಕೆ ತಿರುಗಿದೆ. ರಾಜ್ಯ ಸರ್ಕಾರ ಗಡಿ ಭಾಗದ ಹಿಂದುಳಿದ ಜಿಲ್ಲೆಯ ಜನರಿಗೆ ಉತ್ತಮ ಚಿಕಿತ್ಸೆ ಸಿಗಲ್ಲವೆಂದು ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ 700 ಹಾಸಿಗೆಯ ಹೊಸ ಆಸ್ಪತ್ರೆ ನಿರ್ಮಾಣ ಮಾಡಿದೆ. ಆದರೆ ಇಷ್ಟೆಲ್ಲ ಖರ್ಚು ಮಾಡಿದ ಸರ್ಕಾರಕ್ಕೆ, ಆಡಳಿತ ಮಂಡಳಿಗೆ ಕನಿಷ್ಠ ಇಲಿಗಳ ನಿಯಂತ್ರಣ ಮಾಡಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಜನರನ್ನು ಕಾಡಲಾರಂಭಿಸಿದೆ.
ಬ್ರಿಮ್ಸ್ ಆಸ್ಪತ್ರೆಯ ಅವ್ಯವಸ್ಥೆ...ನವಜಾತ ಶಿಶು ಮೇಲೆ ಇಲಿಗಳ ದಾಳಿ ಇಲ್ಲಿನ ಭಾಲ್ಕಿ ತಾಲೂಕಿನ ಡೊಂಗರಗಿ ಗ್ರಾಮದ ರೂಪಾವತಿ ಹಾಗೂ ಅರುಣಕುಮಾರ ಎಂಬ ದಂಪತಿ ಜೂನ್ 28ರಂದು ಹೆರಿಗೆಗಾಗಿ ಬ್ರಿಮ್ಸ್ ಆಸ್ಪತ್ರೆಗೆ ಆಗಮಿಸಿದ್ದಾರೆ. ಈ ವೇಳೆ ತಾಯಿ ರೂಪಾವತಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆದರೆ ಈ ವೇಳೆ ಒಂದು ಮಗು ಸಾವನ್ನಪ್ಪಿದೆ. ಇಲ್ಲೂ ಸಹ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಇದಲ್ಲದೆ ಇನ್ನೊಂದು ಮಗು ಆರೋಗ್ಯ ಚೆನ್ನಾಗಿದೆ ಎಂದು ವಾರ್ಡ್ಗೆ ಶಿಫ್ಟ್ ಮಾಡಲಾಗಿತ್ತು. ಈ ವೇಳೆ ವಾರ್ಡ್ನಲ್ಲೇ ಇದ್ದ ಶೌಚಾಲಯ ತೆರೆಯದೆ ಸಿಬ್ಬಂದಿ ಬೇರೊಂದು ವಾರ್ಡ್ನ ಶೌಚಾಲಯ ಬಳಸುವಂತೆ ಬಾಣಂತಿಗೆ ಸೂಚಿಸಿದ್ದಾರೆ. ಮಗುವನ್ನು ಬಿಟ್ಟು ಶೌಚಾಲಯಕ್ಕೆ ತೆರಳಿ ಬರುವ ವೇಳೆಗೆ ಮಗು ಮೇಲೆ ಇಲಿಗಳು ದಾಳಿ ನಡೆಸಿರುವುದು ಕಂಡುಬಂದಿದೆ.
ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ರಾಮಚಂದ್ರನ್, ಇಂತಹ ದೊಡ್ಡ ಆಸ್ಪತ್ರೆಯಲ್ಲಿ ಇಲಿಗಳು ಹೇಗೆ ಬಂದವು ಎಂಬುದು ನಿಜಕ್ಕೂ ಆಶ್ಚರ್ಯವಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ. ಆಸ್ಪತ್ರೆಯಲ್ಲಿನ ಅಶಿಸ್ತಿನ ಕುರಿತಂತೆ ಶಿಸ್ತು ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ.