ಬಸವಕಲ್ಯಾಣ (ಬೀದರ್): ಬಯೋ ಡೀಸೆಲ್ ಎಂದು ಮಿಕ್ಸ್ ಹೈಡ್ರೋ ಕಾರ್ಬನ್ ಆಯಿಲ್ ಮಾರಾಟ ಮಾಡುತಿದ್ದ ಜಾಲದ ಮೇಲೆ ದಾಳಿ ನಡೆಸಿದ ಗ್ರಾಮೀಣ ಠಾಣೆ ಪೊಲೀಸರ ತಂಡ ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರಿಂದ ಸುಮಾರು 22.5 ಲಕ್ಷ ರೂ. ಮೌಲ್ಯದ ಮಿಕ್ಸ್ ಹೈಡ್ರೋ ಕಾರ್ಬನ್ ಆಯಿಲ್ ಜಪ್ತಿ ಮಾಡಲಾಗಿದೆ. ಹುಮನಾಬಾದ್ ನಿವಾಸಿ ಎಂಡಿ ಇಮಾಮೋದ್ದಿನ್ ಹಾಗೂ ಲಾರಿ ಚಾಲಕ ಉತ್ತರ ಪ್ರದೇಶ ಮೂಲದ ನೀರಜ್ ರಾಮಮೂರ್ತಿ ಬಂಧಿತ ಆರೋಪಿಗಳು, ಚಂಡಕಾಪೂರ ಸಮೀಪ ಟ್ಯಾಂಕರ್ ಮೂಲಕ ಈ ಆಯಿಲ್ ಮಾರಾಟ ಮಾಡುತಿದ್ದ ವೇಳೆ, ಸಿಪಿಐ ರಘುವೀರಸಿಂಗ್ ಠಾಕೂರ್ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿದೆ.
25 ಲಕ್ಷ ಮೌಲ್ಯದ ಟ್ಯಾಂಕರ್ ಸಹಿತ 22.5 ಲಕ್ಷ ರೂ. ಮೌಲ್ಯದ 30 ಸಾವಿರ ಲೀಟರ್ ಆಯಿಲ್ ಹಾಗೂ 16,400 ನಗದು ಜಪ್ತಿ ಮಾಡಿಕೊಳ್ಳಲಾಗಿದ್ದು, ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.