ಬಸವಕಲ್ಯಾಣ: ಕೊರೊನಾ ಸೋಂಕಿನ ಹಾವಳಿ ಹೆಚ್ಚಾಗಿದೆ. ಇಂದು ಒಂದೇ ದಿನ 42 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಒಟ್ಟು ಪ್ರಕರಣ 173ಕ್ಕೆ ಏರಿಕೆಯಾಗಿದೆ.
ಶನಿವಾರ ಸೋಂಕು ಪೀಡಿತರಲ್ಲಿ 14 ಜನ ಮಹಿಳೆಯರು ಹಾಗೂ 28 ಜನ ಪುರುಷರಿದ್ದು, ಈ ಪೈಕಿ 5 ವರ್ಷದ ಮೂವರು ಬಾಲಕರು, 6 ಹಾಗೂ 8 ವರ್ಷದ ತಲಾ ಒಬ್ಬರು ಬಾಲಕಿಯರು ಸೋಂಕಿಗೆ ಒಳಗಾಗಿದ್ದಾರೆ. ಇನ್ನು ತಾಲೂಕಿನ ಭೋಸಗಾ ಒಂದೇ ಗ್ರಾಮದಲ್ಲಿ 13 ಜನರಿಗೆ ಸೋಂಕು ಪತ್ತೆಯಾಗಿದ್ದು, ಉಳಿದಂತೆ ಲಾಡವಂತಿ-6, ಎಕಲೂರ ವಾಡಿ, ಘಾಟಹಿಪ್ಪರ್ಗಾ ತಾಂಡಾ, ದಾಸರವಾಡಿ ಹಾಗೂ ಬೇಲೂರನಲ್ಲಿ ತಲಾ 3 ಜನ, ಸೀರೂರಿ-2, ಖೇರ್ಡಾ(ಕೆ), ಸಸ್ತಾಪೂರ, ಜನವಾಡಾ, ರಾಜೇಶ್ವರ, ಹತ್ಯಾಳ ತಾಂಡಾ, ಹಾಮುನಗರ ತಾಂಡಾದಲ್ಲಿ ತಲಾ ಒಬ್ಬರು ಹಾಗೂ ನಗರದಲ್ಲಿ ಒಬ್ಬ ಮಹಿಳೆ ಹಾಗೂ ಸಮೀಪದ ತ್ರಿಪುರಾಂತನಲ್ಲಿ ಒಬ್ಬರು ಸೇರಿದಂತೆ ಒಂದೇ ದಿನ 42 ಜನರಿಗೆ ಸೋಂಕು ಪತ್ತೆಯಾಗಿದೆ.
ಸೋಂಕಿತರಲ್ಲಿ ಇಬ್ಬರು ತೆಲಂಗಾಣ ಹಾಗೂ ಒಬ್ಬರು ಪೂನಾದಿಂದ ಬಂದವರಾದರೆ, ಉಳಿದವರೆಲ್ಲರು ಮುಂಬೈನಿಂದ ಮರಳಿ ಬಂದವರಾಗಿದ್ದಾರೆ. ಕ್ವಾರಂಟೈನ್ ಕೇಂದ್ರದಲ್ಲಿ ಅಡುಗೆ ಸಿಬ್ಬಂದಿಯಾಗಿ ಕೆಲಸ ಮಾಡಿದ 35 ವರ್ಷದ ಮಹಿಳೆಗೂ ಸೋಂಕು ಧೃಢಪಟ್ಟಿದೆ. ಅನ್ಯ ರಾಜ್ಯದಿಂದ ಆಗಮಿಸಿದವರಿಗೆ ಅಡುಗೆ ಮಾಡಿ ಬಡಿಸಿದ್ದಾರೆ. ಹೀಗಾಗಿ ಸೋಂಕಿತರಿಂದ ಇವರಿಗೆ ಸೋಂಕು ತಗುಲಿರಬಹುದು ಎಂದು ಹೇಳಲಾಗುತ್ತಿದೆ.