ಬೀದರ್/ಹುಮನಾಬಾದ್:ರಾಷ್ಟ್ರೀಯ ಹೆದ್ದಾರಿಯ ವಿವಿಧಡೆ ದಾಳಿ ನಡೆಸಿ ಅಕ್ರಮವಾಗಿ ಸಾಗಿಸುತ್ತಿದ್ದ ಒಟ್ಟು 358 ಕೆ.ಜಿ ಗಾಂಜಾ, ಲಾರಿ, ಕಾರು ಸೇರಿದಂತೆ ಅಂದಾಜು 42 ಲಕ್ಷ ರೂ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಂಡು, 7 ಜನ ಆರೋಪಿಗಳನ್ನು ಬಂಧಿಸುವಲ್ಲಿ ಹುಮನಾಬಾದ ಉಪ ವಿಭಾಗದ ಪೊಲೀಸರು ಯಶ್ವಸಿಯಾಗಿದ್ದಾರೆ.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಗುರವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿಶೋರ ಬಾಬು, ’’ಗಾಂಜಾ ಸಾಗಣೆ ಮೇಲೆ ವಿಶೇಷ ನಿಗಾವಹಿಸಲಾಗಿದ್ದು, ಡಿ.31 ರಿಂದ ಜನೇವರಿ 11 ವರಗೆ ಹುಮನಾಬಾದ ಉಪ ವಿಭಾಗದ ವಿವಿಧಡೆ ದಾಳಿ ನಡೆಸಲಾಗಿದೆ. ಆಂಧ್ರ ಕಡೆಯಿಂದ ಮಹಾರಾಷ್ಟ್ರದ ಪೂಣೆ ಕಡೆಗೆ ಅಕ್ರಮವಾಗಿ ಗಾಂಜಾ ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ’’ ಎಂದರು.
ಚಿಟಗುಪ್ಪ ತಾಲೂಕಿನ ಮನ್ನಾ ಎಖೇಳ್ಳಿ ಬೈಪಾಸ್ನಲ್ಲೂ ದಾಳಿ: ಮಧ್ಯಾಹ್ನ ಚಿಟಗುಪ್ಪ ತಾಲೂಕಿನ ಮನ್ನಾಎಖೇಳ್ಳಿ ಬೈಪಾಸ್ನ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನ್ಯೂ ಫ್ರೇಂಡ್ಸ್ ಧಾಬಾದ ಹತ್ತಿರ ಮಹಾರಾಷ್ಟ್ರದ ಪೂನಾ ಕಡೆಗೆ ಹಾಲೋಬ್ಲಾಕ್ ಕಲ್ಲು ತುಂಬಿಕೊಂಡು ತೆರಳುತ್ತಿದ್ದ ಲಾರಿಯ ಮೇಲೆ ದಾಳಿ ನಡೆಸಿದ್ದು, ಅದರಲ್ಲಿ ಅಡಗಿಸಿಟ್ಟಿದ್ದ ಅಂದಾಜು 18.40ಲಕ್ಷ ರೂ.ಗಳ ಮೌಲ್ಯದ 230 ಕೆಜಿ ಗಾಂಜಾ, ಲಾರಿ ಜಪ್ತಿ ಮಾಡಿಕೊಂಡಿದ್ದು, ಲಾರಿ ಕ್ಲೀನರ್ ದಾಡಗಿ ಗ್ರಾಮದ ವಿಜಯಕುಮಾರ ಶ್ರಾವಣ ಮದನೂರ, ಲಾರಿ ಮಾಲಿಕ ಕನಕಟ್ಟಾ ಗ್ರಾಮದ ಎಂ.ಡಿ ವಾಜೀದ್, ಎಂ.ಡಿ. ಶಮಶೋದ್ದಿನ್ ಓತಗಿ ಎಂಬುವವರನ್ನು ಬಂಧಿಸಿದ್ದು, ಮನ್ನಾಎಖೇಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಜನವರಿ 6 ರಂದು ಹುಮನಾಬಾದ್ ಬಸ್ ನಿಲ್ದಾಣದ ಸೋಲಾಪೂರಕ್ಕೆ ಹೋಗುವ ಪ್ಲಾಟ್ ಫಾಂ ನಲ್ಲಿ ದಾಳಿ ನಡೆಸಿ, ತಾಲಸೆಯ ಲಕ್ಷ್ಮಣ ಜಗನಾಥ ಕಾಳೆ, ಲೋನಕಾಳದ ಸಂತೋಷ ಸುರೇಶ್ ಮಾಳಿ ಎಂಬ ಆರೋಪಿಗಳನ್ನು ಬಂಧಿಸಿ, ಅವರಿಂದ ಅಂದಾಜು 2.10 ಲಕ್ಷ ರೂ.ಗಳ 28 ಕೆ.ಜಿ. ಗಾಂಜಾ, 2380 ರೂ.ಗಳ 2 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಹುಮನಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿ.31 ರಂದು ಮಂಠಾಳ ಠಾಣೆಯ ವ್ಯಾಪ್ತಿಯ ರಾಷ್ಟ್ರೀಯ ಹೆದ್ದರಿಯಲ್ಲಿ ಅಕ್ರಮ ಗಾಂಜಾ ಸಾಗಿಸುತ್ತಿದ್ದ ಕಾರ ಮೇಲೆ ದಾಳಿ ನಡೆಸಿ ಕಾರು ಸಮೇತ ಅಂದಾಜು ಮೌಲ್ಯ 15 ಲಕ್ಷ ರೂ.ಗಳ ಒಟ್ಟು 100 ಕೆ.ಜಿ. ಗಾಂಜಾ, ಕಾರು, ಎರಡು ಮೊಬೈಲ್ ವಶಪಡಿಸಿಕೊಂಡಿದ್ದು, ನಾಂದೇಡ್ ನ ಇಮ್ರಾನ್ ಅಹ್ಮದ್ ಶೇಖ್, ನಾಗಪೂರದ ಗಗನ್ ತುಳಿರಾಮ ಸಹಾರೆ, ಕರಮಾಳದ ಗೌರವ ದಿಲೀಪ ದೋಷಿ ಎಂಬುವವರನ್ನು ಬಂಧಿಸಲಾಗಿದೆ. ಮಂಠಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಎಲ್ಲಾ ಆರೋಪಿಗಳನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಎಸ್ಪಿ ಕಿಶೋರ್ ಬಾಬು ಮಾಹಿತಿ ನೀಡಿದರು.
ಈ ಕಾರ್ಯದಲ್ಲಿ ನನ್ನ ಹಾಗೂ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ, ಉಪ ವಿಭಾಗದ ಎಎಸ್ ಪಿ ಶಿವಾಂಶು ರಜಪೂತ ಮಾರ್ಗದರ್ಶನದಲ್ಲಿ ಚಿಟಗುಪ್ಪ ಸಿಪಿಐ ಅಮೂಲ ಕಾಳೆ, ಹುಮನಾಬಾದ ಸಿಪಿಐ ಶರಣಬಸಪ್ಪ ಕೋಡ್ಲಾ, ಮಂಠಾಳ ಸಿಪಿಐ ವಿಜಯಕುಮಾರ, ಪಿಎಸ್ಐಗಳಾದ ಸುದರ್ಶನರಡ್ಡಿ ಮನ್ನಾಎಖೇಳ್ಳಿ, ಮಂಜನಗೌಡ ಪಾಟೀಲ ಹುಮನಾಬಾದ, ವಸೀಮ ಪಟೇಲ್ ಮಂಠಾಳ, ಅಂಬ್ರೀಶ ವಾಗ್ಮೋರೆ, ಎಎಸ್ಐ ರಾಚಯ್ಯ ಸ್ವಾಮಿ, ಸಿಬ್ಬಂದಿಗಳಾದ ಭಗವಂತ ಬಿರಾದಾರ, ಮಲ್ಲಪ್ಪ ಮಳ್ಳಿ, ಆಕಾಶ ಸಿಂಧೆ, ಬಾಬುರಾವ ಕೋರೆ, ಬಾಲಜಿ ಪಿಚರಟೆ, ಸೂರ್ಯಕಾಂತ, ರಮೇಶ ಖಟಕಚಿಂಚೋಳ್ಳಿ, ಶಕೀಲ್ ಐ.ಎಸ್, ಶರಣಬಸಪ್ಪ ಚಳಕಾಪೂರೆ, ರಾಜರಡ್ಡಿ, ಅನೀಲ ಪಡಶೇಟ್ಟಿ, ಸನ್ಮುಖಯ್ಯ ಸ್ವಾಮಿ ಸೇರಿದಂತೆ ಮೂರು ಠಾಣೆಯ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. ಇವರು ಕಾರ್ಯಕ್ಕೆ ಎಸ್ಪಿ ಶ್ಲಾಘನೆ ವ್ಯಕ್ತಪಡಿಸಿದರು. ಹುಮನಾಬಾದ ಉಪವಿಭಾಗದ ಪೊಲೀಸ್ರಿಗೆ ಎಸ್ಪಿ ಕಿಶೋರಬಾಬು ಅವರು 1ಲಕ್ಷ ರೂ.ಗಳ ನಗದು ಬಹುಮಾನ ನೀಡಿದರು.
ಇದನ್ನೂ ಓದಿ:ಗಾಂಜಾ: ಮಂಗಳೂರಿನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಸೇರಿ ಮೂವರ ಬಂಧನ