ಬಸವಕಲ್ಯಾಣ: ತಾಲೂಕಿನಲ್ಲಿ ಸೋಮವಾರ ಒಂದೇ ದಿನ 26 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 102ಕ್ಕೆ ಏರಿಕೆಯಾಗಿದೆ.
ತಾಲೂಕಿನ ಕಲಖೋರಾ ತಾಂಡಾ ದೇವಿ ನಗರ(ತಾಂಡಾ)ದಲ್ಲಿ 17 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಉಳಿದಂತೆ ಘಾಟ್ ಹಿಪ್ಪರಗಾ ತಾಂಡಾದಲ್ಲಿ 4, ಸಿರೂರಿಯಲ್ಲಿ 2, ಜಾನಾಪುರನಲ್ಲಿ 1, ಕೋಹಿನೂರ ಪಹಾಡನಲ್ಲಿ 1 ಹಾಗೂ ಹುಲಸೂರ ವ್ಯಾಪ್ತಿಯ ಮುಚಳಂಬನಲ್ಲಿ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಈ 26 ಜನರ ಪೈಕಿ ಮೂವರು ಮಹಿಳೆಯರಾಗಿದ್ದು, ಉಳಿದ 23 ಜನರು ಪುರುಷರಾಗಿದ್ದಾರೆ.
ಕಲಖೋರಾ ತಾಂಡಾದಲ್ಲಿ ಸೋಂಕು ಪತ್ತೆಯಾದ 17 ಜನರು ಕಳೆದ ಮೇ 11ರಂದು ಮುಂಬೈನಿಂದ ಬಂದು ಬೇಟಬಾಲಕುಂದಾ ಗ್ರಾಮದ ಕ್ವಾರಂಟೈನ್ ಕೇಂದ್ರದಲ್ಲಿದ್ದರು. ಕ್ವಾರಂಟೈನ್ ಅವಧಿ ಮುಗಿದ ನಂತರ ಇವರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ ನಂತರ ಮನೆಗೆ ಕಳಿಸಲಾಗಿತ್ತು. ಈಗ ಇವರಲ್ಲಿ ಸೋಂಕು ಪತ್ತೆಯಾಗಿದೆ. ಈ ಹಿಂದೆ ಕೋಹಿನೂರು ತಾಲೂಕಿನಲ್ಲಿ ಒಟ್ಟು 16 ಜನರಲ್ಲಿ ಸೋಂಕು ಪತೆಯಾಗಿತ್ತು. ಅದರೆ ಇದೀಗ ಇವರಲ್ಲಿ 11 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರಳಿದ್ದಾರೆ. ಕಲಖೋರಾ ದೇವಿ ನಗರ ತಾಂಡಾದಲ್ಲಿ ಶನಿವಾರ ಒಬ್ಬರು ಹಾಗೂ ಭಾನುವಾರ 17 ಜನರಲ್ಲಿ ಸೋಂಕು ಪತ್ತೆಯಾಗುವ ಮೂಲಕ ತಾಂಡಾದಲ್ಲಿ ಸೋಂಕಿತರ ಸಂಖ್ಯೆ 18ಕ್ಕೇರಿದ್ದು, ತಾಂಡಾ ಜನರಲ್ಲಿ ಆತಂಕ ಮನೆ ಮಾಡಿತ್ತು.
ತಾಲೂಕಿನಲ್ಲಿ ಇದುವರೆಗೆ ಸೋಂಕು ದೃಢಪಟ್ಟವರಲ್ಲಿ ಬಹುತೇಕ ಜನ ಮಹಾರಾಷ್ಟ್ರದಿಂದ ಬಂದವರಾಗಿದ್ದು, ಈ ಪೈಕಿ ಬಹುತೇಕರು ಕ್ವಾರಂಟೈನ್ ಅವಧಿ ಮುಗಿಸಿ ಮನೆಗಳಿಗೆ ತೆರಳಿದ್ದಾರೆ. ಇವರೆಲ್ಲರ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಟೆಸ್ಟ್ಗೆ ಕಳಿಸಲಾಗಿತ್ತು. ಕೆಲವರಿಗೆ ಕ್ವಾರಂಟೈನ್ ಅವಧಿಯಲ್ಲಿಯೇ ಪಾಸಿಟಿವ್ ಬಂದರೆ, ಕೆಲವರ ವರದಿ ಮನೆಗೆ ತೆರಳಿದ ನಂತರ ಪಾಸಿಟಿವ್ ಬರುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.