ಬಸವಕಲ್ಯಾಣ(ಬೀದರ್): ಬಡವರ ಹೊಟ್ಟೆ ಸೇರಬೇಕಿದ್ದ ಪಡಿತರ ಅಕ್ಕಿ ಕಾಳ ಸಂತೆಯಲ್ಲಿ ಮಾರಾಟವಾಗುತ್ತಿದೆ ಎಂಬ ಮಾಹಿತಿ ಪಡೆದ ಆಹಾರ ಇಲಾಖೆ ಅಧಿಕಾರಿಗಳು, ಅನ್ಯರಾಜ್ಯಕ್ಕೆ ಸಾಗಿಸುತಿದ್ದ ಲಾರಿ ಸಹಿತ 6 ಲಕ್ಷ ರೂ. ಮೌಲ್ಯದ 200 ಕ್ವಿಂಟಾಲ್ ಅಕ್ಕಿಯನ್ನು ಜಪ್ತಿ ಮಾಡಿದ್ದಾರೆ.
ಹೈದರಾಬಾದ್ - ಮುಂಬೈ ಮಾರ್ಗದ ರಾಷ್ಟ್ರೀಯ ಹೆದ್ದಾರಿ - 65ರ ಮೂಲಕ ಬೀದರ್ ಕಡೆಯಿಂದ ಲಾರಿಯಲ್ಲಿ ಅಕ್ಕಿ ಸಾಗಿಸುವ ವೇಳೆ, ಚಂಡಕಾಪೂರ ಸಮೀಪದ ಅಮೃತಕುಂಡ ಕ್ರಾಸ್ ಬಳಿ ದಾಳಿ ನಡೆಸಿದ ಆಹಾರ ಇಲಾಖೆ ಅಧಿಕಾರಿಗಳ ತಂಡ, ಅಕ್ಕಿ ತುಂಬಿದ ಲಾರಿ ಸಹಿತ 20 ಟನ್ ಪಡಿತರ ಅಕ್ಕಿ ಜಪ್ತಿ ಮಾಡಿಕೊಂಡಿದ್ದು, ಗುಜರಾತ್ ಮೂಲದ ಲಾರಿ ಚಾಲಕ ಮಾರು ನಜಾಭಾಯಿ ಹಾಗೂ ಕ್ಲೀನರ್ ಮಾರು ಕನಾಭಾಯಿ ಎನ್ನುವವರನ್ನು ಬಂಧಿಸಿದೆ.