ಬಸವಕಲ್ಯಾಣ: ತಾಲೂಕಿನಲ್ಲಿಂದು ಇಬ್ಬರಿಗೆ ಸೋಂಕು ತಗುಲಿದೆ. ಇದರಿಂದಾಗಿ ಸೋಂಕಿತರ ಸಂಖ್ಯೆ 108ಕ್ಕೆ ತಲುಪಿದೆ. ನಗರದ ಸೀತಾ ಕಾಲೋನಿಯ 32 ವರ್ಷದ ಶಿಕ್ಷಕಿ ಹಾಗೂ ತಾಲೂಕಿನ ಘಾಟಹಿಪ್ಪರಗಾ ಗ್ರಾಮದ 30 ವರ್ಷದ ಮಹಿಳೆ ಸೇರಿ ಇಂದು ಇಬ್ಬರಿಗೆ ಸೋಂಕು ದೃಢಪಟ್ಟಿದೆ.
ಸೋಂಕಿಗೊಳಗಾದ ನಗರದ ಶಿಕ್ಷಕಿ ಮೂಲತಃ ಹುಮನಾಬಾದ್ ತಾಲೂಕಿನ ನಿರ್ಣಾ ಗ್ರಾಮದವರಾಗಿದ್ದಾರೆ. ಇಲ್ಲಿನ ಸರ್ಕಾರಿ ಮಾದರಿ ಶಾಲೆಯ ಶಿಕ್ಷಕಿಯಾಗಿದ್ದಾರೆ. ಕಳೆದ ತಿಂಗಳು ಚಿಟಗುಪ್ಪದಲ್ಲಿ ತಮ್ಮ ಸಹೋದರನ ಮನೆಯಲ್ಲಿ ಜರುಗಿದ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ತೆರಳಿದ್ದು, ಸೋಂಕಿಗೊಳಗಾದ (P-5434) ಸಹೋದರನಿಂದ ಇವರಿಗೂ ಸೋಂಕು ತಗುಲಿದೆ ಎನ್ನಲಾಗುತ್ತಿದೆ.
ಚಿಟಗುಪ್ಪಗೆ ಹೋಗಿ ಬಂದ ಮೇಲೆ ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಆದರೆ, ಚಿಕಿತ್ಸೆಯಿಂದ ಜ್ವರ ಕಡಿಮೆಯಾಗದ ಕಾರಣ ಸಂಶಯಗೊಂಡ ಖಾಸಗಿ ಆಸ್ಪತ್ರೆ ವೈದ್ಯರು ಕಳೆದ 31ರಂದು ಬೀದರ್ ಆಸ್ಪತ್ರೆಗೆ ಕಳುಹಿಸಿದ್ದರು. ಪರೀಕ್ಷೆ ನಂತರ ಸೋಂಕು ದೃಢಪಟ್ಟಿದೆ. ಸದ್ಯ ಇವರು ಬೀದರ್ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದು, ಇವರ ಪತಿ, ಪುತ್ರ ಸೇರಿ ಕುಟುಂಬದ ಇತರೆ ಸದಸ್ಯರೆಲ್ಲರೂ ನಗರದ ಸೀತಾ ಕಾಲೋನಿಯಲ್ಲಿ ಇದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಘಾಟಹಿಪ್ಪರಗಾ ಗ್ರಾಮದಲ್ಲಿ ಸೋಂಕಿಗೆ ಒಳಗಾದ ಮಹಿಳೆಯು ಮಹಾರಾಷ್ಟ್ರದಿಂದ ಮರಳಿ ಬಂದವರಾಗಿದ್ದು, ಕೆಲ ದಿನಗಳ ಹಿಂದೆ ಇವರ 14 ವರ್ಷದ ಪುತ್ರಿಗೂ ಸೋಂಕು ತಗುಲಿತ್ತು. ಪುತ್ರಿ ಜೊತೆಗೆ ತಾಯಿಯನ್ನೂ ಕೂಡಾ ಬೀದರ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಇಂದು ತಾಯಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ.