ಬಸವಕಲ್ಯಾಣ:ಮಹಾಮಾರಿ ಕೊರೊನಾ ಸೋಂಕಿಗೆ ನಗರದ ಇಬ್ಬರು ವೃದ್ಧರು ಮೃತಪಟ್ಟಿದ್ದು, ಮತ್ತೆ ಓರ್ವ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಜ್ವರ, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ನಗರದ ತ್ರಿಪುರಾಂತನ ಬುನಕರ್ ಕಾಲನಿಯ 73 ವರ್ಷದ ವೃದ್ಧೆ ಖಾಸಗಿ ಆಸ್ಪತ್ರೆಯಲ್ಲಿ 5 ದಿವಸ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿದ್ದರು. ಜೂ.20 ರಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ. ಸದ್ಯ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಸದ್ಯ 11 ಜನ ಕುಟುಂಬದವರು, ಒಬ್ಬರು ವೈದ್ಯರು ಹಾಗೂ ಇಬ್ಬರು ನರ್ಸ್ ಗಳು ಸೇರಿದಂತೆ ಒಟ್ಟು 14 ಜನರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಾಗಿದೆ.
ಇನ್ನು ನಗರದ ವಿಜಯ ನಗರ ಕಾಲನಿಯ 75 ವರ್ಷದ ವೃದ್ಧನೊಬ್ಬ ಕಳೆದ 22 ರಂದು ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಈತನಿಗೂ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಲೋ ಬಿಪಿಯಿಂದ ಬಳಲುತ್ತಿದ್ದ ಇವರು ನಗರದ ಬಸ್ ನಿಲ್ದಾಣ ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಕೆಲ ದಿನಗಳ ಕಾಲ ಚಿಕಿತ್ಸೆ ಪಡೆದು ನಂತರ ಕಲಬುರಗಿ ಆಸ್ಪತ್ರೆಗೆ ತೆರಳಿದ್ದರು ಎಂದು ತಿಳಿದು ಬಂದಿದೆ.
ಮೃತ ವೃದ್ಧೆ ಹಾಗೂ ವೃದ್ಧ ಇವರಿಬ್ಬರೂ ಯಾವುದೇ ಟ್ರಾವೆಲ್ ಹಿಸ್ಟರಿ ಹೊಂದಿಲ್ಲ. ಆದರೆ ಇವರಿಗೆ ಸೋಂಕು ಎಲ್ಲಿಂದ ತಗುಲಿದೆ ಎನ್ನುವ ಪ್ರಶ್ನೆ ಎದುರಾಗಿದ್ದು, ಜನರಲ್ಲಿ ಆತಂಕ ಹೆಚ್ಚಿದೆ.
ತ್ರಿಪುರಾಂತ ಬುನಕರ ಕಾಲನಿಯ 45 ವರ್ಷದ ಮಹಿಳೆಗೆ ಸೋಂಕು ಇರುವುದು ದೃಢಪಟ್ಟಿದ್ದು, ಇವರನ್ನು ಬೀದರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತಾಲೂಕಿನಲ್ಲಿ ಇದುವರೆಗಿನ ಸೋಂಕಿತರ ಸಂಖ್ಯೆ 196 ತಲುಪಿದ್ದು, ಮೃತರ ಸಂಖ್ಯೆ 4ಕ್ಕೆ ಏರಿದೆ.