ಬೀದರ್: ರಾಜ್ಯದಲ್ಲಿ ಮೊದಲ ಹಂತದಲ್ಲಿ 11133 ಪೌರ ಕಾರ್ಮಿಕರನ್ನು ಖಾಯಂ ಗೊಳಿಸಲಾಗುತ್ತದೆ ಎಂದು ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ ಶಿವಣ್ಣ ಕೋಟೆ ಹೇಳಿದರು.
ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಶನಿವಾರ ನಡೆದ ಪೌರ ಕಾರ್ಮಿಕರ ಕುಂದು ಕೊರತೆಗಳ ಬಗ್ಗೆ ಪೌರ ಕಾರ್ಮಿಕರು ಮತ್ತು ಅಧಿಕಾರಿಗಳಿಗೆ ಕರೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಒಟ್ಟು 53,000 ಪೌರ ಕಾರ್ಮಿಕರನ್ನು ಖಾಯಂಗೊಳಿಸುವ ಗುರಿ ಇದ್ದು, ಮೊದಲ ಹಂತವಾಗಿ 11133 ಪೌರ ಕಾರ್ಮಿಕರನ್ನು ಖಾಯಂಗೊಳಿಸಲಾಗುತ್ತಿದೆ ಮತ್ತು ಎರಡನೇ ಹಂತದಲ್ಲಿ ಇನ್ನುಳಿದವರಿಗೂ ಖಾಯಂಗೊಳಿಸಲಾಗುವುದು ಎಂದು ತಿಳಿಸಿದರು.
ಪೌರ ಕಾರ್ಮಿಕರಿಗೆ ಎಲ್ಲರೂ ಗೌರವ ಕೊಡಬೇಕು, ಸಮಾಜದಲ್ಲಿ ಯಾರು ಮಾಡದ ಕೆಲಸವನ್ನು ಅವರು ಮಾಡುತ್ತಾರೆ. ಪ್ರಧಾನಮಂತ್ರಿಗಳೇ ಪೌರ ಕಾರ್ಮಿಕರ ಪಾದ ಪೂಜೆ ಮಾಡಿ ಅವರಿಗೆ ಗೌರವ ಸಲ್ಲಿಸಿದ್ದಾರೆ ಮತ್ತು ರಾಜ್ಯದ ಮುಖ್ಯಮಂತ್ರಿಗಳು ಪೌರ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ವಿಶೇಷ ಒತ್ತು ನೀಡುತ್ತಿದ್ದಾರೆ. ಹಾಗಾಗಿ ಸಮಾಜದಲ್ಲಿ ಅವರಿಗೆ ಗೌರವಯುತವಾಗಿ ನೋಡಿಕೊಳ್ಳಬೇಕೆಂದು ಹೇಳಿದರು.
ಪೌರ ಕಾರ್ಮಿಕರ ಹಣ ಪಾವತಿಯ ನಂತರ ಸ್ಯಾಲರಿ ಸ್ಲಿಪ್ ಕೊಡಬೇಕು ಮತ್ತು ಎಸ್.ಬಿ.ಐ. ಲೈಫ್ ಇನ್ಸೂರೆನ್ಸ್ ಅನ್ನು ಅವರಿಗೆ ಕಡ್ಡಾಯವಾಗಿ ಮಾಡಿಸಬೇಕು. ಪೌರ ಕಾರ್ಮಿಕರ ಮಕ್ಕಳಿಗೆ ಶಿಕ್ಷಣಕ್ಕೆ ಬೇಕಾಗುವ ಸವಲತ್ತುಗಳನ್ನು ಕೊಡಬೇಕು ಮತ್ತು ಅವರ ಆರೋಗ್ಯದ ಬಗ್ಗೆಯೂ ವಿಶೇಷ ಕಾಳಜಿ ವಹಿಸಬೇಕು ಹಾಗೂ ಅವರಿಗೆ ಕೆಲಸ ಮಾಡಿದ ನಂತರ ವಿಶ್ರಾಂತಿ ತೆಗೆದುಕೊಳ್ಳಲು ಒಳ್ಳೆಯ ವಿಶ್ರಾಂತಿ ಗೃಹಗಳನ್ನು ನಿರ್ಮಿಸಬೇಕೆಂದರು.
ನಾನು ಯಾವುದೇ ಜಿಲ್ಲೆಗೆ ಹೋದರೆ ಮೊದಲು ಪೌರ ಕಾರ್ಮಿಕರ ಸಮಸ್ಯೆಗಳನ್ನು ಕೇಳಿ ಅಧಿಕಾರಿಗಳ ಸಭೆ ನಡೆಸುತ್ತೇನೆ ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಅವರ ಸಮಸ್ಯೆಗಳನ್ನು ಗಮನಕ್ಕೆ ತಂದು ಕ್ರಮವಹಿಸಲು ನಿರ್ದೇಶನ ನೀಡುತ್ತೇನೆ. ಪೌರ ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ, ಅವರು ಒಳ್ಳೆಯ ಉದ್ಯೋಗವನ್ನು ಪಡೆಯುವಂತಾಗಬೇಕು. ಯಾವುದೇ ಸಮಸ್ಯೆಗಳಿದ್ದರೆ ವಾಟ್ಸಾಪ್ ಮೂಲಕ ದೂರುಗಳನ್ನು ಆಯೋಗಕ್ಕೆ ಕಳಿಸಬಹುದಾಗಿದೆ ಎಂದು ಸಲಹೆ ನೀಡಿದರು.
ಮೃತಪಟ್ಟ ಪೌರ ಕಾರ್ಮಿಕರಿಗೆ 10 ಲಕ್ಷ ರೂಪಾಯಿ ಪರಿಹಾರ:ಮ್ಯಾನುವೆಲ್ ಸ್ಕ್ಯಾವೆಂಜರ್‌ಗಳು ತಮ್ಮ ಜಿಲ್ಲೆಯಲ್ಲಿ ಇರದಂತೆ ನೋಡಿಕೊಳ್ಳಬೆಕು, ಈ ಹಿಂದೆ ರಾಮನಗರ ಮತ್ತು ಕಲಬುರಗಿ ಸೇರಿದಂತೆ ರಾಜ್ಯದ ಇತರೆ ಕಡೆ ಮೃತಪಟ್ಟ ಪೌರ ಕಾರ್ಮಿಕರಿಗೆ 10 ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗಿದೆ. ತಮ್ಮ ಜಿಲ್ಲೆಯಲ್ಲಿ ಪೌರ ಕಾರ್ಮಿಕರಿಗೆ ಯಾವುದೇ ಸುರಕ್ಷತಾ ಪರಿಕರಗಳನ್ನು ಕೊಟ್ಟಿಲ್ಲ ಮತ್ತು ಕಸ ಗೂಡಿಸಲು ಪೊರಕೆಗಳನ್ನು ಕೊಡುತ್ತಿಲ್ಲವೆಂದು ಕಾರ್ಮಿಕರು ಹೇಳುತ್ತಿದ್ದಾರೆ. ಹಾಗಾಗಿ ನಿರ್ಲಕ್ಷ್ಯ ವಹಿಸುವ ಯಾವುದೇ ಅಧಿಕಾರಿಯಾದರೂ ಅವರ ವಿರುದ್ಧ ಆಯೋಗದಿಂದ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.