ಬಳ್ಳಾರಿ : ಹೊಸ ವರ್ಷಾಚರಣೆಗೆ ಕೇಕ್ ತರಲು ಹೋಗಿದ್ದ ಯುವಕನನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಗರದ ವಡ್ಡರಬಂಡೆಯಲ್ಲಿರುವ ಬೇಕರಿವೊಂದರ ಬಳಿ ಭಾನುವಾರ ರಾತ್ರಿ ನಡೆದಿದೆ. ಮೃತ ವ್ಯಕ್ತಿಯನ್ನು ಆರ್ ಕೆ ಕಾಲೊನಿಯ ನಿವಾಸಿ ಸೈಯದುಲ್ಲಾ (24) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಬಾಪೂಜಿ ನಗರದ ನಿವಾಸಿ ರಜಾಕ್ ಅಲಿ (26) ಗಾಯಗೊಂಡಿದ್ದು, ವಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ರಾತ್ರಿ ಸುಮಾರು 8.30ಕ್ಕೆ ಸೈಯದುಲ್ಲಾ ಮತ್ತು ರಜಾಕ್ ಅಲಿ ಹೊಸ ವರ್ಷಾಚರಣೆಗೆ ಕೇಕ್ ತರಲು ವಡ್ಡರಬಂಡೆಯಲ್ಲಿರುವ ಬೇಕರಿಯೊಂದಕ್ಕೆ ಬಂದಿದ್ದರು. ಈ ವೇಳೆ ದುಷ್ಕರ್ಮಿಗಳು ಚಾಕು ಇರಿದು ಪರಾರಿಯಾಗಿದ್ದು, ಸೈಯದುಲ್ಲಾ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ರಜಾಕ್ ಅಲಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಸಂಬಂಧ ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚಿನ ಪ್ರಕರಣ- ವಿಜಯಪುರದಲ್ಲಿ ಯುವಕನ ಹತ್ಯೆ: ಹಾಡಹಗಲೇ ಯುವಕನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿದ್ದ ಘಟನೆ ವಿಜಯಪುರದ ಹಕೀಂ ಚೌಕ್‌ನಲ್ಲಿ ಇತ್ತೀಚೆಗೆ ನಡೆದಿತ್ತು. ಮೃತ ಯುವಕನನ್ನು ಮಹಾರಾಷ್ಟ್ರದ ಪುಣೆ ನಿವಾಸಿ ಅಯಾನ್ ಶೇಖ್ (19) ಎಂದು ಗುರುತಿಸಲಾಗಿತ್ತು. ಚಪ್ಪರಬಂದ್ ಕಾಲೊನಿ ನಿವಾಸಿ ಹುಸೇನ್ ಸಾಬ್ (22) ನಂದಿಹಾಳ ಕೊಲೆಗೈದ ಆರೋಪಿ. ಕೊಲೆ ಬಳಿಕ ಪರಾರಿಯಾಗಿದ್ದ ಹುಸೇನ್ನನ್ನು ಪೊಲೀಸರು ಬಂಧಿಸಿದ್ದರು. ಘಟನೆ ದೃಶ್ಯ ಸ್ಥಳೀಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಬಳಿಕ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.