ಹೊಸಪೇಟೆ (ವಿಜಯನಗರ):ಬೈಕ್ ಕೊಡಿಸಿಲ್ಲ ಎಂದು ಮನನೊಂದ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಪೋತಲಗಟ್ಟೆ ಗ್ರಾಮದಲ್ಲಿ ನಡೆದಿದೆ. ಸ್ವಾಮಿ (21) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಯುವಕ.
ತಂದೆ ಹಾಗೂ ಮಗನ ಮಧ್ಯೆ ಬೈಕ್ ಕೊಡಿಸುವ ವಿಷಯವಾಗಿ ಕಳೆದ ಕೆಲ ದಿನಗಳಿಂದ ಆಗ್ಗಾಗ್ಗೆ ವಾದ-ವಿವಾದ ನಡೆಯುತ್ತಲೇ ಇತ್ತು. ಬೈಕ್ ಖರೀದಿಸಲು ಈಗ ಹಣವಿಲ್ಲ. ಹಣ ಕೂಡಿದ ಬಳಿಕ ಬೈಕ್ ಕೊಡಿಸುವುದಾಗಿ ತಂದೆ ತಾಯಪ್ಪ ಮಗನಿಗೆ ಸಾಕಷ್ಟು ಬಾರಿ ಬುದ್ಧಿವಾದ ಹೇಳಿದ್ದನು.
ಆದ್ರೆ ಬುದ್ಧಿಮಾತು ಕೇಳದ ಮಗ ಸ್ವಾಮಿ ಇಂದು ನನಗೆ ಬೈಕ್ ಬೇಕೇ ಬೇಕು ಎಂದು ಹಠ ಹಿಡಿದು ತಂದೆಯ ಜೊತೆ ಜಗಳ ತೆಗೆದಿದ್ದನಂತೆ. ಜಗಳ ಅತಿರೇಕಕ್ಕೆ ಹೋಗಿದ್ದರಿಂದ ತಾಯಪ್ಪ ಅಲ್ಲಿಗೆ ಸುಮ್ಮನಾಗಿದ್ದ. ಆದ್ರೆ ಬೈಕ್ ಖರೀದಿ ಮಾಡಲು ಒಪ್ಪಿಗೆ ಸೂಚಿಸದ ತಂದೆಯ ವರ್ತನೆಗೆ ಬೇಸತ್ತು ಸ್ವಾಮಿ ವಿಷ ಸೇವಿಸಿದ್ದಾನೆ.
ಸುದ್ದಿ ತಿಳಿಯುತ್ತಿದ್ದಂತೆ ತಕ್ಷಣ ಅವನನ್ನು ಮರಿಯಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆ ದಾಖಲಿಸಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಸ್ವಾಮಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮರಿಯಮ್ಮನಹಳ್ಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.