ವಿಜಯನಗರ: ಒಲೆ ಹೊತ್ತಿ ಉರಿದರೆ ನಿಲ್ಲಬಹುದು, ಧರೆ ಹೊತ್ತಿ ಉರಿದರೆ ನಿಲ್ಲದು ಎಂದು ಕೋಡಿಮಠದ ಪೀಠಾಧ್ಯಕ್ಷ ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಮಾರ್ಮಿಕವಾಗಿ ಭವಿಷ್ಯ ನುಡಿದಿದ್ದಾರೆ. ಹೊಸಪೇಟೆಯ ಬಿಜೆಪಿ ನಾಯಕಿ ರಾಣಿ ಸಂಯುಕ್ತ ಅವರ ನಿವಾಸದಲ್ಲಿ ಪಾದಪೂಜೆ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, 2023 ಕ್ಕೆ ಜಾಗತಿಕ ಮಟ್ಟದಲ್ಲಿ ಈ ರೀತಿ ಸಮಸ್ಯೆ ಎದುರಾಗಲಿದೆ. ಜಾಗತಿಕವಾಗಿ ಬಹಳ ದೊಡ್ಡ ಸಮಸ್ಯೆ ಕಾಡುತ್ತದೆ. ಸಾಧು ಸಂತರಿಗೆ ಸಮಸ್ಯೆಯಾಗಲಿದೆ. ರಾಜ್ಯದಲ್ಲಿ ಒಂದು ಪಕ್ಷ ಮಾತ್ರ ಅಧಿಕಾರಕ್ಕೆ ಬರುತ್ತದೆ ಎಂದ ಶ್ರೀಗಳು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರ ಮಾಡುವುದಿಲ್ಲ ಎಂದರು.
ಹಿಂದೂ ಸಂಪ್ರದಾಯದ ಪ್ರಕಾರ ಸಂಕ್ರಾಂತಿ ಫಲ ಹಾಗೂ ಯುಗಾದಿ ಫಲ ಹೇಳುತ್ತಾರೆ. ಇಂತಿಂತ ಫಲ ಇಂತಿಂತವರಿಗೆ ಎಂದು ಬರುತ್ತದೆ. ಸಂಕ್ರಾಂತಿಗೆ ಇನ್ನೂ ಒಂದು ದಿನವಿದೆ. ಯುಗಾದಿಗೆ ಇನ್ನೂ ಎರಡು ತಿಂಗಳುಗಳಿವೆ. ಆಶುಭ ದಿನಗಳ ಕಳೆಯದೆ ಫಲವನ್ನು ಹೇಳುವಂತಿಲ್ಲ. ಯಾವುದೇ ಭವಿಷ್ಯವನ್ನು ಹೇಳಬೇಕಾದರೆ ಅದಕ್ಕೆ ಒಂದು ಅವಧಿ ಅಂತಿದೆ. ಅದರ ನಂತರವೇ ಹೇಳಬೇಕು. ಸಂಕ್ರಾಂತಿ, ಯುಗಾದಿ ನಂತರ ಮತ್ತೆ ಮಳೆ ಬರುವ ಲಕ್ಷಣ ಇದೆ. ಕಳೆದ ವರ್ಷ ಹೇಗಾಯಿತೋ ಅದೇ ರೀತಿ ಈ ವರ್ಷವೂ ಸಂಭವಿಸುವ ಸಾಧ್ಯತೆಯಿದೆ.
ಜಾಗತಿಕವಾಗಿ ಬರುವ ಸಮಸ್ಯೆ ಹೇಳಬೇಕಾದರೆ ಒಲೆ ಹೊತ್ತಿ ಉರಿದರೆ ಸಹಿಸಿಕೊಳ್ಳಬಹುದು ಅಥವಾ ಅದರಿಂದ ಅಡುಗೆ ಮಾಡಿಕೊಳ್ಳಬಹುದು. ಆದರೆ, ಧರೆಯೇ ಹೊತ್ತಿ ಉರಿದರೆ ಅದನ್ನು ಎದುರಿಸಲು ಸಾಧ್ಯವಿಲ್ಲ. ಅಂತಹ ಪ್ರಸಂಗ ಇಡೀ ಜಗತ್ತಿಗೆ ಆವರಿಸುತ್ತದೆ. 2023ರಲ್ಲಿ ಜಗತ್ತೇ ಎದ್ದು ನಿಲ್ಲಕ್ಕಾಗದಂತಹ ಪರಿಸ್ಥಿತಿ ಬರುವ ಲಕ್ಷಣ ಇದೆ. ಸಾಧು ಸಂತರಿಗೆ ತೊಂದರೆ ಆಗುವ ಲಕ್ಷಣ ಇದೆ. ಎರಡ್ಮೂರು ದೊಡ್ಡ ದೊಡ್ಡ ತಲೆಗಳು ಉರುಳುತ್ತವೆ. ಕೊರೊನಾ ನಾಲ್ಕನೇ ಅಲೆಯಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಇನ್ನೂ ಹೆಚ್ಚಿನ ರಾಜಕೀಯ ಭವಿಷ್ಯ ಹೇಳಬೇಕಾದರೆ ಸಂಕ್ರಾಂತಿ ಕಳಿಯಲಿ ಎಂದು ಸ್ವಾಮೀಜಿ ತಿಳಿಸಿದ್ದಾರೆ.