ಬಳ್ಳಾರಿ: ವಿಷಕಾರಿ ಹಾವುಗಳು ಯಾರಿಗೂ ಕಚ್ಚೋದಿಲ್ಲ, ಅವುಗಳಿಗೆ ಯಾರಾದರೂ ತೊಂದರೆ ಮಾಡಿದರೆ ಮಾತ್ರ ಕಚ್ಚುತ್ತವೆ. ಹೀಗಾಗಿ, ನನಗೆ ಹಾವುಗಳೆಂದರೆ ಭಯವೂ ಇದೆ. ಅಷ್ಟೇ ಪ್ರೀತಿಯೂ ಇದೆ ಎಂದು ಉರಗ ರಕ್ಷಕ ಹಾಗೂ ಯುವ ವೈದ್ಯ ತಮ್ಮ ಅನುಭವದ ಮಾತನ್ನು ಹೇಳಿದ್ದಾರೆ.
ಸಾಮಾನ್ಯವಾಗಿ ಹಾವುಗಳೆಂದರೆ ಎಲ್ಲರಲ್ಲೂ ಭಯವಿರುತ್ತೆ. ಅವು ಸುಮ್ಮನೇ ಕಚ್ಚುತ್ತವೆ, ಹಾವು ಕಚ್ಚಿದರೆ ಸಾಯುತ್ತಾರೆಂಬ ತಪ್ಪು ಗ್ರಹಿಕೆ ನಮ್ಮ ಜನರಲ್ಲಿದೆ. ಹೀಗಾಗಿ, ಹಾವು ಕಡಿತಕ್ಕೆ ಒಳಗಾದವರು ನೇರವಾಗಿ ಸಮೀಪದ ಆಸ್ಪತ್ರೆಗೆ ಬಾರದೇ ನಾಟಿ ವೈದ್ಯರ ಬಳಿ ಹೋಗಿ ಯಡವಟ್ಟು ಮಾಡಿಕೊಂಡು ತಮ್ಮ ಸಾವಿಗೆ ತಾವೇ ಕಾರಣರಾಗುತ್ತಾರೆ. ಹೀಗಾಗಿ, ನಮ್ಮ ದೇಶದಲ್ಲಿ ಕಳೆದ 20 ವರ್ಷಗಳಿಂದ ಅಂದಾಜು 12 ಲಕ್ಷಕ್ಕೂ ಅಧಿಕ ಮಂದಿ ಹಾವು ಕಡಿತಕ್ಕೊಳಗಾಗಿ ನಾಟಿ ಔಷಧಿಯ ಮೊರೆ ಹೋಗಿ ಸಾವನ್ನಪ್ಪುವುದು ದುರದೃಷ್ಟಕರ ಸಂಗತಿ ಎಂದು ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್) ಕಾಲೇಜಿನ ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಡಾ. ಅಶೋಕಕುಮಾರ ಬೇಸರ ವ್ಯಕ್ತಪಡಿಸಿದರು.
ಎಂಬಿಬಿಎಸ್ ಜೊತೆ ಉರಗಗಳ ರಕ್ಷಣೆಯಲ್ಲಿ ಯುವ ವೈದ್ಯ: ಸತತ ನಾಲ್ಕು ವರ್ಷಗಳಿಂದಲೂ ನಾನು ಬಳ್ಳಾರಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಹಾವುಗಳನ್ನ ಹಿಡಿಯುತ್ತಿದ್ದೇನೆ. ಈವರೆಗೆ 675 ಕ್ಕೂ ಅಧಿಕ ಹಾವುಗಳನ್ನ ಜೀವಂತವಾಗಿ ಸೆರೆ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟುಬಂದಿರುವೆ. ಜಿಲ್ಲೆಯಲ್ಲಿ 26 ಪ್ರಭೇದದ ಹಾವುಗಳಿವೆ. ಆ ಪೈಕಿ ಈಗಾಗಲೇ ನಾನು 13 ಪ್ರಭೇದದ ಹಾವುಗಳನ್ನ ನಾನಾ ಪ್ರದೇಶಗಳಲ್ಲಿ ಸೆರೆ ಹಿಡಿದು ರಕ್ಷಣೆ ಮಾಡಿದ್ದೇನೆ. ನನ್ನ ಗುರುಗಳಾದ ಕಾಶೀನಾಥ್ ನೆಗಳೂರುಮಠ ಅವರೇ ನನಗೆ ಸ್ಫೂರ್ತಿ ಎಂದು ಡಾ. ಅಶೋಕಕುಮಾರ್ ಹೇಳಿದರು.