ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯ ಪ್ರತಿಯೊಂದು ಪೊಲೀಸ್ ಠಾಣೆಯಲ್ಲೂ ಮಹಿಳೆಯರ ದೂರುಗಳ ಸ್ವೀಕೃತಿ ಕೇಂದ್ರಗಳನ್ನ ತೆರೆಯಲಾಗಿದ್ದು, ಅದಕ್ಕೆ ಪೂರಕವಾದ ಅಗತ್ಯ ಸೌಲಭ್ಯಗಳನ್ನ ಜಿಲ್ಲಾ ಪೊಲೀಸ್ ಇಲಾಖೆ ಕಲ್ಪಿಸಿದೆ.
ಜಿಲ್ಲೆಯ ಪ್ರತಿಯೊಂದು ಪೊಲೀಸ್ ಠಾಣೆಗಳಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯ ಹಾಗೂ ಲೈಂಗಿಕ ಕಿರುಕುಳ ಸೇರಿದಂತೆ ಇನ್ನಿತರ ದೂರುಗಳನ್ನ ಸ್ವೀಕರಿಸುವ ಸಲುವಾಗಿಯೇ ಪ್ರತ್ಯೇಕ ದೂರು ಸ್ವೀಕರಿಸುವ ಕೇಂದ್ರಗಳನ್ನ ತೆರೆಯಲಾಗಿದೆ. ಇದಲ್ಲದೇ, ಮಹಿಳಾ ಅಧಿಕಾರಿಯನ್ನೂ ಕೂಡ ನೇಮಕ ಮಾಡಲಾಗಿದೆ. ಯಾವುದೇ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಆಯಾ ಪೊಲೀಸ್ ಠಾಣೆಗೆ ಬಂದು ಮುಕ್ತವಾಗಿ ತಮ್ಮ ತಮ್ಮ ದೂರುಗಳನ್ನ ನಿರ್ಭಯವಾಗಿ ನೀಡುವ ಸಲುವಾಗಿ ಈ ವ್ಯವಸ್ಥೆ ಮಾಡಲಾಗಿದೆ.
ದೌರ್ಜನ್ಯಕ್ಕೆ ಒಳಗಾದ ಮಹಿಳೆಯರೊಂದಿಗೆ ಯಾವ ರೀತಿಯಾಗಿ ನಡೆದುಕೊಳ್ಳಬೇಕು ಎಂಬುದರ ಸಲುವಾಗಿ ಅಗತ್ಯ ತರಬೇತಿ ಕೂಡ ಪೊಲೀಸ್ ಸಿಬ್ಬಂದಿಗೆ ನೀಡಲಾಗಿದೆ. ದೌರ್ಜನ್ಯಕ್ಕೆ ಒಳಗಾದ ಮಹಿಳೆರಿಗೆ ಕೌನ್ಸೆಲಿಂಗ್ ಮಾಡುವ ವಿಧಾನದ ಕುರಿತು ಈಗಾಗಲೇ ತರಬೇತಿ ನೀಡಲಾಗಿದೆ. ಹೀಗಾಗಿ, ಯಾವುದಾದರೂ ಠಾಣೆಗೆ ಮಹಿಳೆಯರು ಮುಕ್ತವಾಗಿ ಆಗಮಿಸಿ ತಮಗಾದ ಅನ್ಯಾಯ ಅಥವಾ ದೌರ್ಜನ್ಯದ ಕುರಿತು ದೂರು ನೀಡಬಹುದಾಗಿದೆ.
ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ಎಸ್ಪಿ ಸೈದುಲು ಅಡಾವತ್ ಅವರು, ಕಳೆದ ಮುರ್ನಾಲ್ಕು ವರ್ಷಗಳಿಂದಲೂ ಮಹಿಳೆಯರ ದೂರುಗಳಿಗೆ ಸಂಬಂಧಿಸಿದಂತೆ ಆಯಾ ಠಾಣೆಗಳಲ್ಲಿ ಮಹಿಳಾ ದೂರು ಕೇಂದ್ರಗಳನ್ನು ಆರಂಭಿಸಲಾಗಿದೆ. ಕಳೆದ ವರ್ಷ ಶೇ.30 ರಷ್ಟು ಮಹಿಳೆಯರಿಂದ ದೂರುಗಳನ್ನ ಸ್ವೀಕರಿಸಲಾಗಿದೆ. ಇದಲ್ಲದೇ, ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪದ್ಧತಿ ಜಾರಿಯಲ್ಲಿದೆ. ಅದನ್ನ ತಡೆಯುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯು ಕಟ್ಟುನಿಟ್ಟಿನ ಕ್ರಮ ಜರುಗಿಸಲು ಸನ್ನದ್ಧವಾಗಿದೆ ಎಂದರು.