ಬಳ್ಳಾರಿ:ಮತದಾನದ ಚಲಾವಣೆಗೆ ಬಂದಿದ್ದ ಗರ್ಭಿಣಿಗೆ ಸಹಜ ಹೆರಿಗೆಯಾದ ಅಪರೂಪದ ಘಟನೆ ಜಿಲ್ಲೆಯ ಕುರುಗೋಡು ತಾಲೂಕಿನ ಕೊರ್ಲಗುಂದಿ ಗ್ರಾಮದ ಮತಗಟ್ಟೆ ಸಂಖ್ಯೆ 228ರಲ್ಲಿ ಜರುಗಿದೆ.
ಗ್ರಾಮದ ಮಣಿಲಾ ಎಂಬ ಮಹಿಳೆಗೆ ಬೆಳಗ್ಗೆ 10 ಗಂಟೆಗೆ ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದ ನಂತರ ಹೆರಿಗೆ ನೋವು ಕಾಣಿಸಿಕೊಂಡಿದೆ. ಮತದಾನ ಕೇಂದ್ರದಲ್ಲಿ ಸಹಜ ಹೆರಿಗೆಯಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಕ್ಷಣ ತಾಯಿ ಮತ್ತು ನವಜಾತ ಶಿಶುವನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ.
ಈ ಘಟನೆ ಕುರಿತಾಗಿ ಸೆಕ್ಟರ್ ಅಧಿಕಾರಿ ವೆಂಕಟೇಶ್ ರಾಮಚಂದ್ರಪ್ಪ ಮಾತನಾಡಿ,ಮತದಾನ ಕೇಂದ್ರದಲ್ಲಿ ಸಹಜ ಹೆರಿಗೆಯಾಗಿದೆ. ಚುನಾವಣೆ ಸಿಬ್ಬಂದಿ ಮತ್ತು ಮತದಾನಕ್ಕೆ ಬಂದಿದ್ದ ಮಹಿಳೆಯರು ಮಣಿಲಾ ಹೆರಿಗೆ ಮಾಡಿಸಲು ಸಹಕರಿಸಿದರು. ಕೂಡಲೇ ತಾಯಿ ಮಗುವನ್ನು ಆರೋಗ್ಯ ಕೇಂದ್ರಕ್ಕೆ ಸೇರಿಸಲಾಯಿತು. ತಾಯಿ, ಮಗು ಆರೋಗ್ಯವಾಗಿದ್ದು, ಸದ್ಯ ಆರೋಗ್ಯ ಕೇಂದ್ರದಲ್ಲಿ ಆರೈಕೆಯಲ್ಲಿದ್ದಾರೆ ಎಂದು ಮಾಹಿತಿ ನೀಡಿದರು. ಪಿಡಿಒ ಆದಿಲಕ್ಷ್ಮಿ, ಗ್ರಾಮಲೆಕ್ಕಾಧಿಕಾರಿ ಮಧುಕುಮಾರ್ ಇದ್ದರು.
ಕಾಲಿನಿಂದ ಮತ: ಎರಡೂ ಕೈ ಇಲ್ಲದ ಮುಸ್ತಾಫ ಎಂಬ ವಿಶೇಷಚೇತನ ವ್ಯಕ್ತಿ ಕೊಳಗಲ್ ಗ್ರಾಮದ ಮತಗಟ್ಟೆಯಲ್ಲಿ ಕಾಲಿನಿಂದ ಮತ ಚಲಾಯಿಸಿ ಕಾಲಿನ ಬೆರಳಿಗೆ ಶಾಹಿ ಹಾಕಿಸಿಕೊಂಡು ಗಮನ ಸೆಳೆದರು.
ಇದನ್ನೂಓದಿ:ಮೊದಲ ಬಾರಿಗೆ ತಮ್ಮ ಹಕ್ಕು ಚಲಾಯಿಸಿದ ಶಾಮನೂರು ಮಲ್ಲಿಕಾರ್ಜುನ ಪುತ್ರ ಪುತ್ರಿ.. ವೋಟ್ ಮಾಡಿದ ಸಂಸದ ಸಿದ್ದೇಶ್ವರ್