ಕರ್ನಾಟಕ

karnataka

ETV Bharat / state

ವರ್ಷದಲ್ಲೇ ಬಳ್ಳಾರಿಗೆ 3 ಎಸ್ಪಿಗಳು: ಹೊಸಬರನ್ನೂ ಬದಲಾಯಿಸುತ್ತಾ ಬಿಜೆಪಿ ಸರ್ಕಾರ? - ಬಳ್ಳಾರಿ ಜಿಲ್ಲಾ ಪೊಲೀಸ್​ ಇಲಾಖೆ

ಕಳೆದ ಒಂದು ವರ್ಷದಲ್ಲಿ ಬಳ್ಳಾರಿ ಜಿಲ್ಲಾ ಪೊಲೀಸ್​ ಇಲಾಖೆ ಮೂವರು ವರಿಷ್ಠಾಧಿಕಾರಿಗಳನ್ನ ಕಂಡಿದ್ದು, ನೂತನ ಸರ್ಕಾರ ರಚನೆಯಾಗಿದ್ದರಿಂದ ಮತ್ತೆ ಎಸ್​​ಪಿಯನ್ನ ಬದಲಾವಣೆ ಮಾಡುತ್ತಾ ಎಂಬ ಕುತೂಹಲ ಕಾಡುತ್ತಿದೆ.

ವರ್ಷದಲ್ಲೆ ಮೂವರು ಎಸ್ಪಿಗಳು ಬದಲು

By

Published : Jul 27, 2019, 9:58 PM IST

ಬಳ್ಳಾರಿ:ದಕ್ಷ - ಪ್ರಾಮಾಣಿಕ ಅಧಿಕಾರಿ ಎಂದೇ ಹೆಸರುವಾಸಿಯಾಗಿದ್ದ ಆರ್.ಚೇತನ್ ಅವರು ಪಕ್ಕದ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆಗೊಂಡ ಬಳಿಕ ಗಣಿನಾಡಿಗೆ ವರ್ಷದಲ್ಲೇ ಮೂವರು ಎಸ್​ಪಿಗಳನ್ನ ಬದಲಿಸುವ ಮೂಲಕ ರಾಜ್ಯದ ಮೈತ್ರಿಕೂಟ ಸರ್ಕಾರ ವಿಶೇಷ ಗಮನ ಸೆಳೆದಿತ್ತು.

ವರ್ಷದಲ್ಲೇ ಮೂವರು ಎಸ್ಪಿಗಳು ಬದಲು

ಹಾಲಿ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾದ ಆರ್.ಚೇತನ್ ಅವರು ಗಣಿನಾಡು ಬಳ್ಳಾರಿಯಿಂದ ವರ್ಗಾವಣೆಗೊಂಡ ಬಳಿಕ 2018ರ ಮಾರ್ಚ್ 16ರಂದು ಅರುಣ್ ರಂಗರಾಜನ್ ಅವರು ಎಸ್​ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಅಧಿಕಾರ ವಹಿಸಿಕೊಂಡ ಮಾರನೇ ದಿನ ಬಳ್ಳಾರಿ ನಗರದ ಮುನ್ಸಿಪಲ್ ಮೈದಾನದಲ್ಲಿ ರೌಡಿಗಳ ಪೆರೇಡ್ ನಡೆಸಿ, ತಮ್ಮ ಶಿಸ್ತುಬದ್ಧ ಅಧಿಕಾರವನ್ನು ಪ್ರದರ್ಶಿಸಿದ್ದರು.

ಆ ಬಳಿಕ ಹಾಲಿ ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಅವರು ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರಿಂದ ಲೋಕಸಭಾ ಉಪ ಚುನಾವಣೆ ಎದುರಾಯಿತು. ಉಪ ಚುನಾವಣೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಯಶಸ್ವಿಯಾದ ಅವರನ್ನ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ವರ್ಗಾವಣೆಗೊಳಿಸಿ ಕಾರ್ಯ ವ್ಯಾಪ್ತಿಯ ಸ್ಥಳ ತೋರಿಸದೆ 2019ರ ಮಾರ್ಚ್ 18ರಂದು ಏಕಾಏಕಿ ವರ್ಗಾವಣೆ ಮಾಡಿತ್ತು.

ಕೇವಲ ಒಂದು ವರ್ಷದ ಅವಧಿಗೆ ಮಾತ್ರ ಅರುಣ್ ರಂಗರಾಜನ್ ಅವರು ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಆ ಬಳಿಕ ಲಕ್ಷ್ಮಣ ಬಿ. ನಿಂಬರಗಿ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ 2019ರ ಮಾರ್ಚ್ 20ರಂದು ಅಧಿಕಾರ ಸ್ವೀಕರಿಸಿದರು.‌ ಅಷ್ಟೊತ್ತಿಗಾಗಲೇ ಲೋಕಸಭಾ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿತ್ತು.‌ ಕೇವಲ ಚುನಾವಣಾ ಕಾರ್ಯದ ನಿಮಿತ್ತ ಅವರನ್ನು ನೇಮಿಸಲಾಗಿದೆ ಎನ್ನಲಾಗಿತ್ತು. ಜಿಲ್ಲೆಯಲ್ಲಿ ಕೇವಲ ನಾಲ್ಕು ತಿಂಗಳು, ಎಂಟು ದಿನಗಳ ಕಾಲ ಕರ್ತವ್ಯ ನಿರ್ವಹಿಸಿದ ಅವರು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಶ್ರಮಿಸಿದ್ದರು.

ಮೈತ್ರಿಕೂಟ ಸರ್ಕಾರದ ಪತನವಾಗೋ ಮುನ್ಸೂಚನೆ ಹಿನ್ನೆಲೆಯಲ್ಲಿ ಲಕ್ಷ್ಮಣ ನಿಂಬರಗಿ ಅವರನ್ನು ರಾಜ್ಯ ಸರ್ಕಾರ ಏಕಾಏಕಿ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ವರ್ಗಾವಣೆ ಮಾಡಿತ್ತು. ಈಗ ಎಸ್ಪಿ ಸಿ.ಕೆ.ಬಾಬಾ ಅವರನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ನೇಮಕಗೊಳಿಸಿ ಕೇವಲ‌ ಎಂಟು ದಿನಗಳಾಗಿದೆ.

ಇದೀಗ ಬಿಜೆಪಿ ನೇತೃತ್ವದ ಸರ್ಕಾರ ರಚನೆಯಾಗಿದ್ದು, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ. ರಾಜಕೀಯ ಸ್ಥಿತ್ಯಂತರದ ಅನುಗುಣವಾಗಿ ತಮಗಿಷ್ಟವಾದ ಅಧಿಕಾರಿಗಳನ್ನು ವರ್ಗಾಯಿಸಿಕೊಳ್ಳುವ ಸಂಸ್ಕೃತಿ ಆಯಾ ರಾಜಕೀಯ ಪಕ್ಷಗಳಲ್ಲಿದೆ. ಕೇವಲ ಹದಿನಾಲ್ಕು ತಿಂಗಳಲ್ಲಿ ಮೂವರು ಎಸ್ಪಿಗಳನ್ನು ಕಂಡ ಗಣಿನಾಡಿನ ಜನರು ಇದೀಗ ಬದಲಾದ ಸರ್ಕಾರದಲ್ಲೂ ಇನ್ನೆಷ್ಟು ಅಧಿಕಾರಿಗಳ ವರ್ಗಾವಣೆಯಾಗುತ್ತೋ ಎಂಬುದನ್ನು ಕಾದು ನೋಡುವಂತಾಗಿದೆ.

ABOUT THE AUTHOR

...view details