ಬಳ್ಳಾರಿ:ವಿಮ್ಸ್ ಲ್ಯಾಬ್ ಟೆಕ್ನಿಷಿಯನ್ ವಿ ಕೆ ಯಾದವಾಡ ಅವರ ಮೇಲೆ ಜೂನ್ 12ರಂದು ರಾತ್ರಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆಯ (ಸೋಮವಾರ) ದಿನ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಸಾಮಾಜಿಕ ಕಾರ್ಯಕರ್ತ ರಾಜಶೇಖರ ಮುಲಾಲಿ ಅವರಿಗೆ ಕೌಲ್ ಬಜಾರ್ ಠಾಣೆಯ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ.
ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ಲ್ಯಾಬ್ ಟೆಕ್ನಿಷಿಯನ್ ಯಾದವಾಡ ಅವರ ಮೇಲಿನ ಹಲ್ಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಮಂದಿಯನ್ನು ವಿಚಾರಣೆಗೆ ಒಳಪಡಿಸಿದಾಗ, ರಾಜಶೇಖರ ಮುಲಾಲಿಯವರೇ ಈ ಹಲ್ಲೆ ಪ್ರಕರಣಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂದು ವಿಚಾರಣೆ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅದಕ್ಕೆ ಪೂರಕವಾದ ಕೆಲ ಸಾಕ್ಷಿಗಳು ಕೂಡ ಕೌಲ್ ಬಜಾರ್ ಠಾಣೆಯ ಪೊಲೀಸರಿಗೆ ದೊರೆತಿವೆಯಂತೆ. ಹೀಗಾಗಿ, ಸಾಮಾಜಿಕ ಕಾರ್ಯಕರ್ತ ರಾಜಶೇಖರ ಮುಲಾಲಿಯವರಿಗೆ ನೋಟಿಸ್ ಜಾರಿ ಗೊಳಿಸಲಾಗಿದೆ. ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠ ಲಕ್ಷ್ಮಣ ಬಿ ನಿಂಬರಗಿ ತಿಳಿಸಿದ್ದಾರೆ.