ಕರ್ನಾಟಕ

karnataka

ETV Bharat / state

ನೈಸರ್ಗಿಕ ಸಂಪತ್ತು ಲೂಟಿ ಮಾಡಿದ ರೆಡ್ಡಿ ಜನ್ಮದಿನಕ್ಕೆ ಅದ್ಧೂರಿ ಅಭಿನಂದನೆ ಏಕೆ?: ಟಪಾಲ್ ಗಣೇಶ್​ ಅಕ್ರೋಶ - ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಹುಟ್ಟುಹಬ್ಬ

ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅವರ ಜನ್ಮದಿನದ ಅಂಗವಾಗಿ ಬಳ್ಳಾರಿ ನಗರದಾದ್ಯಂತ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುವ ಕಟೌಟ್​ಗಳನ್ನು ಅಳವಡಿಸಲಾಗಿದ್ದು, ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಟಪಾಲ್ ಗಣೇಶ್, ನೈಸರ್ಗಿಕ ಸಂಪತ್ತು ಲೂಟಿ ಮಾಡಿದ ಗಾಲಿ ಜನಾರ್ದನ ರೆಡ್ಡಿಗೆ ಅದ್ಧೂರಿ ಅಭಿನಂದನೆ ಏಕೆ ಎಂದು ಪ್ರಶ್ನಿಸಿದ್ದಾರೆ.

Tapal Ganesh
ವೀಡಿಯೋ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಟಪಾಲ್ ಗಣೇಶ್​

By

Published : Jan 11, 2021, 1:41 PM IST

ಬಳ್ಳಾರಿ: ಜಿಲ್ಲೆಯ ನೈಸರ್ಗಿಕ ಸಂಪತ್ತುಗಳನ್ನು ಲೂಟಿ ಮಾಡಿರುವ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅವರ ಜನ್ಮದಿನಕ್ಕೆ ಇಷ್ಟೊಂದು ಅದ್ಧೂರಿಯಾದ ಅಭಿನಂದನೆ ಏತಕ್ಕೆ ಎಂದು ಗಣಿ ಅಕ್ರಮದ ಹೋರಾಟಗಾರ ಟಪಾಲ್ ಗಣೇಶ್​ ಪ್ರಶ್ನಿಸಿದ್ದಾರೆ.

ಈ ಸಂಬಂಧ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ಟಪಾಲ್, ಜಿಲ್ಲೆಯ ಗಣಿ ಸಂಪತ್ತನ್ನೇ ಲೂಟಿ ಮಾಡಿದ್ದಲ್ಲದೇ, ಸಿಬಿಐನಿಂದ ಗಡಿಪಾರಿಗೆ ಗುರಿಯಾಗಿರುವ ಗಾಲಿ ಜನಾರ್ದನರೆಡ್ಡಿಯ ಜನ್ಮದಿನದ ಅಂಗವಾಗಿ ಶುಭಾಶಯ ಕೋರುವ ಕಟೌಟ್​​ಗಳನ್ನು ಬಳ್ಳಾರಿಯ ಮಹಾನಗರದ ಪ್ರಮುಖ ರಸ್ತೆಗಳಲ್ಲಿ ಗೋಚರಿಸುತ್ತಿವೆ. ಈ ಮುಖೇನ ಇಡೀ ಜಿಲ್ಲೆಗೆ ಮತ್ತೊಮ್ಮೆ ಕಳಂಕ ತರುವ ಕಾರ್ಯಕ್ಕೆ ಜಿಲ್ಲಾಡಳಿತ ‌ಮುಂದಾಗಿದೆ ಎಂದು ಟಪಾಲ್ ಗಣೇಶ ವಾಗ್ದಾಳಿ ನಡೆಸಿದ್ದಾರೆ.

ವೀಡಿಯೋ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಟಪಾಲ್ ಗಣೇಶ್​

ಗಾಲಿ ಜನಾರ್ದನರೆಡ್ಡಿ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆಯೋ ಅಥವಾ ಅವರು ವಿಶೇಷ ಅತಿಥಿಯೇ ಎಂದು ಪ್ರಶ್ನಿಸಿದ ಟಪಾಲ್, ಕೂಡಲೇ ನಗರದಲ್ಲಿ ಹಾಕಲಾದ ಗಾಲಿ ಜನಾರ್ದನರೆಡ್ಡಿ ಕಟೌಟ್​​ಗಳನ್ನ ತೆರವುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

ರೆಡ್ಡಿ ತನ್ನ ಹುಟ್ಟೂರಾದ ಬಳ್ಳಾರಿಗೆ ಬರಲು ಸುಪ್ರೀಂ ಕೋರ್ಟ್​ನ ಮೊರೆ ಹೋಗಬೇಕು. ರೌಡಿಶೀಟರ್ ಸೇರಿದಂತೆ ಇತರೆ ಅಕ್ರಮ-ಅನೈತಿಕ ಚಟುವಟಿಕೆಯಲ್ಲಿ ತೊಡಗಿರುವವರಿಗಿಂತಲೂ ಗಾಲಿ ಜನಾರ್ದನ ರೆಡ್ಡಿ ಕಡೆಯಾಗಿದ್ದಾರೆ. ಅಂಥವರ ಕಟೌಟ್​​ಗಳನ್ನ ಬಳ್ಳಾರಿ ಮಹಾನಗರದಲ್ಲಿ ಹಾಕುವುದಕ್ಕೆ ಜಿಲ್ಲಾಡಳಿತ ಪರವಾನಗಿ ನೀಡಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ದೇಶದ ಪ್ರಧಾನಿ ನರೇಂದ್ರ ಮೋದಿ, ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಿಸಲು ಶ್ರಮಿಸುತ್ತಿದ್ದಾರೆಂದು ತಿಳಿದುಕೊಂಡಿದ್ದೆ. ಭ್ರಷ್ಟಾಚಾರ ನಿರ್ಮೂಲನೆ ಸ್ವಪಕ್ಷದವರಿಗೆ ಅನ್ವಯಿಸುವುದಿಲ್ಲ, ಕೇವಲ ವಿಪಕ್ಷದವರಿಗೆ ಮಾತ್ರ ಅನ್ವಯಿಸಲಿದೆ ಎಂದು ನನಗೆ ಈಗ ಅರಿವಾಗತೊಡಗಿದೆ. ಗಣಿ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾದ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅವರ ವಿರುದ್ಧ ಕಿಂಚಿತ್ತೂ ಕ್ರಮ ಜರುಗಿಸದಿರುವುದೇ ಇದಕ್ಕೆ ಸಾಕ್ಷಿ ಎಂಬಂತಿದೆ ಎಂದು ಟಪಾಲ್ ಗಣೇಶ ದೂರಿದ್ದಾರೆ.

ABOUT THE AUTHOR

...view details