ವಿಜಯನಗರ :ಹುಬ್ಬಳ್ಳಿಯಲ್ಲಿ ಗಲಾಟೆ ನಡೆದಿರೋದು ದುರಾದೃಷ್ಟಕರ. ಸಣ್ಣ ವಿಚಾರಗಳಿಗೂ ಯಾಕೆ ಕೆರಳ್ತಾರೆ ಎನ್ನುವುದು ಗೊತ್ತಾಗ್ತಿಲ್ಲ. ಸೆಕ್ಯೂಲರ್ಗಳು ಯಾಕೆ ಈಗ ಮಾತನಾಡುತ್ತಿಲ್ಲ? ನಮ್ಮ ಚಾರಿತ್ರಿಕ ದೇವಸ್ಥಾನಗಳನ್ನೇ ನಾಶ ಮಾಡಿದ ಮೇಲೂ ಕೂಡ ನಾವು ಶಾಂತಿ, ಸೌಹಾರ್ದತೆ, ವಿಶ್ವಾಸದಿಂದ ಇದ್ದೇವೆ. ಒಂದು ಸ್ಟೇಟಸ್ ಹಾಕಿದ್ದಕ್ಕೆ ಕಾನೂನು ಯಾಕೆ ಕೈಗೆತ್ತಿಕೊಳ್ಳಬೇಕು. ಈ ನೆಲದ ಕಾನೂನಿಗೆ ಬೆಲೆನೇ ಇಲ್ವಾ, ಸಣ್ಣ ಸಣ್ಣ ಘಟನೆಗಳನ್ನಿಟ್ಟುಕೊಂಡು, ಗಲಾಟೆ ಮಾಡೋಕೆ ಕಾಯ್ತಾ ಇರ್ತಾರಾ ಎಂದು ಸಿ.ಟಿ. ರವಿ ಆಕ್ರೋಶ ವ್ಯಕ್ತಪಡಿಸಿದರು.
ಹೊಸಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿ.ಟಿ ರವಿ, ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಹಾಕಿದ್ರು. 150ಕ್ಕೂ ಹೆಚ್ಚು ವಾಹನಗಳನ್ನು ಸುಟ್ರು, ಅಂಗಡಿ, ಮಳಿಗೆ ಸುಟ್ರು. ಆವಾಗಲೂ ಒಂದು ಸಣ್ಣ ಸ್ಟೇಟಸ್ ಕಾರಣ ಆಗಿತ್ತು. ಅವರ ಮಾನಸಿಕತೆ ಯಾವ ರೀತಿ ಇತ್ತು. ಇದು ಈ ನೆಲದ ಕಾನೂನಿಗೆ ಬೆಲೆ ಕೊಡುವ ಮಾನಸಿಕತೆನಾ? ಎಂದು ಪ್ರಶ್ನಿಸಿದರು.
ನಾನು ಈ ಮಾತು ಹೇಳಿದರೆ ನನ್ನನ್ನೂ ಕಮ್ಯೂನಲ್ ಅಂತಾ ಚಿತ್ರಿಸುತ್ತಾರೆ. ಸ್ಟೇಟಸ್ ಹಾಕಿದವನು ಯಾರೇ ಇರಲಿ, ಹಿಂದೂ, ಮುಸ್ಲಿಂ ಆಗಿರಲಿ, ಗಲಭೆಗೆ ಪ್ರಚೋದಿಸಲು ಹಾಕಿರಬಹುದು. ಅದಕ್ಕಾಗಿ ಹೀಗೆ ಮಾಡೋದಾ? ಪೊಲೀಸ್ ಠಾಣೆಗೆ ದೂರು ಕೊಡಿ, ಕಾನೂನು ಕ್ರಮಕ್ಕೆ ಆಗ್ರಹಿಸಿ, ಕಾನೂನು ಕೈಗೆತ್ತಿಕೊಳ್ಳಿ ಅಂದವರು ಯಾರು ಎಂದರು.