ಬಳ್ಳಾರಿ:ಕೋವಿಡ್ ನಿಯಂತ್ರಣದ ಹೆಸರಿನಡಿ ಅಂದಾಜು 4,000 ಕೋಟಿ ರೂ.ಗೂ ಅಧಿಕ ಹಣವನ್ನ ವ್ಯಯ ಮಾಡಿರುವ ರಾಜ್ಯ ಸರ್ಕಾರ ಸರಿಸುಮಾರು 2000 ಕೋಟಿ ರೂ.ಗೂ ಅಧಿಕ ಹಣವನ್ನ ಲೂಟಿ ಹೊಡೆದಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆರೋಪಿಸಿದ್ದಾರೆ.
ಬಳ್ಳಾರಿಯ ಖಾಸಗಿ ಹೋಟೆಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ಸಾವಿರ ಕೋಟಿ ರೂ.ಗೂ ಅಧಿಕ ಭ್ರಷ್ಟಾಚಾರ ನಡೆದಿದೆ ಎಂದು ದಾಖಲೆಗಳ ಸಮೇತ ಆರೋಪ ಮಾಡಿದಾಗ, ಸರ್ಕಾರವು ಒಂದೊಂದು ಬಾರಿ ಒಂದೊಂದು ರೀತಿಯ ಅಂಕಿ ಅಂಶಗಳನ್ನು ಬಹಿರಂಗಪಡಿಸಿತ್ತು. ಇದೀಗ ಕೋಟ್ಯಂತರ ರೂ. ಲೂಟಿ ಹೊಡೆದು ಈ ರಾಜ್ಯವನ್ನ ಆರ್ಥಿಕ ದಿವಾಳಿತನದತ್ತ ಕೊಂಡೊಯ್ಯಲಾಗುತ್ತಿದೆ ಎಂದು ಆರೋಪಿಸಿದರು.
ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಇನ್ನು ಇದೇ ವೇಳೆ, ಶ್ರೀರಾಮುಲು ಆಪ್ತ ಮಹೇಶ ರೆಡ್ಡಿ ಅಸಹಜ ಸಾವಿನ ಕುರಿತು ಮಾತನಾಡಿದ ಅವರು, ಮಹೇಶ್ ಮೃತದೇಹದ ಅಂತ್ಯಕ್ರಿಯೆಯನ್ನು ತರಾತುರಿಯಲ್ಲಿ ನಡೆಸಿರೊದು ಯಾಕೆ. ಅಂತ್ಯಕ್ರಿಯೆಗೂ ಮುನ್ನ ಕೋವಿಡ್ ಟೆಸ್ಟ್ ಮಾಡಿಸಬೇಕು ಎಂದು ನಿಮಗೆ ತಿಳಿದಿಲ್ಲವೇ. ಸಚಿವ ಶ್ರೀರಾಮುಲು ಅವರಿಗೆ ಈ ನೆಲದ ಕಾನೂನು ಬಗ್ಗೆ ಕಿಂಚಿತ್ತಾದ್ರೂ ಅರಿವಿದ್ದರೇ, ಮಹೇಶರೆಡ್ಡಿ ಅವರ ಅಸಹಜ ಸಾವಿನ ಹಿಂದಿನ ಒಳಮರ್ಮವನ್ನ ಹೇಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಪಿಎಂ ಮೋದಿ ದೆಹಲಿಯನ್ನು ಹಾಗೂ ಸಿಎಂ ಬಿಎಸ್ವೈ ಬೆಂಗಳೂರನ್ನು ಬಿಟ್ಟು ಬೇರೆ ಎಲ್ಲಿಗೂ ಹೋಗಿಲ್ಲ. ಅವರಿಬ್ಬರೂ ದಂತದ ಗೋಪುರದಲ್ಲಿ ಕುಳಿತಿದ್ದಾರೆ. ರಾಜ್ಯದಲ್ಲಿ ಸಾವಿರಾರು ಕೋಟಿ ರೂ.ಗಳ ಭ್ರಷ್ಟಾಚಾರ ನಡೆದಿದೆ ಎಂದು ಸರ್ಕಾರಿ ಇಲಾಖೆಗಳ ಕಡತಗಳೇ ಹೇಳುತ್ತಿವೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣವನ್ನ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಅಲ್ಲದೇ, ವಿಧಾನಮಂಡಲದ ಅಧಿವೇಶವನ್ನ ಕೂಡಲೇ ಕರೆಯಬೇಕು ಎಂದು ಆಗ್ರಹಿಸಿದ್ದಾರೆ.