ಕರ್ನಾಟಕ

karnataka

ETV Bharat / state

ಜೂನ್ ತಿಂಗಳಾಂತ್ಯಕ್ಕೆ ವಿಮ್ಸ್ ಆಡಳಿತ ಮಂಡಳಿಯ ಸಭೆ: ಸಚಿವ ಡಾ.ಕೆ.ಸುಧಾಕರ್​​ - Minister Sudhakar reaction

ಬಳ್ಳಾರಿ ವಿಮ್ಸ್ ಆಸ್ಪತ್ರೆ ಪ್ರತಿನಿತ್ಯ 2,500ಕ್ಕೂ ಹೆಚ್ಚು ಹೊರ ರೋಗಿಗಳು ಮತ್ತು 1,000ಕ್ಕೂ ಹೆಚ್ಚು ಒಳ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರೂ ಕೇವಲ 49 ಲಕ್ಷ ರೂ. ಎಬಿಆರ್​ಕೆ ಹಣ ಪಡೆದಿದೆ. ಮುಂದಿನ ದಿನಗಳಲ್ಲಿ ಕನಿಷ್ಠ 100 ಕೋಟಿ ರೂ. ಎಬಿಆರ್​ಕೆ ಹಣ ಪಡೆಯಬೇಕು. ಈ ಕುರಿತು ಅಧಿಕಾರಿಗಳಿಗೆ ನಿಗಾವಹಿಸುವಂತೆ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್​​ ಸೂಚಿಸಿದರು.

VIMS administration board meeting at the end of June: Minister Sudhakar
ಶಿಕ್ಷಣ ಸಚಿವ ಡಾ.ಕೆ.ಸುಧಾಕರ

By

Published : Jun 12, 2020, 8:46 PM IST

ಬಳ್ಳಾರಿ:ಈ ತಿಂಗಳ ಕೊನೆಯ ವಾರದಲ್ಲಿ ಇಲ್ಲಿನ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್) ಆಸ್ಪತ್ರೆಯ ಆಡಳಿತ ಮಂಡಳಿ ಸಭೆಯನ್ನ (ಜಿಸಿ) ಮಾಡಲಾಗುವುದೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್​​​​​​​​​ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಮೂರು ವರ್ಷಗಳಿಂದ ವಿಮ್ಸ್ ಆಡಳಿತ ಮಂಡಳಿ ಸಭೆ ನಡೆದಿಲ್ಲ ಎಂಬುದರ ಕುರಿತು ಕೇಳಲಾದ ಪ್ರಶ್ನೆಗೆ ಸಚಿವ ಡಾ.ಸುಧಾಕರ್​ ಉತ್ತರಿಸಿ, ನಾನು ಬಂದು ಬಹಳ ದಿನಗಳು ಆಗಿಲ್ಲ. ರಾಜ್ಯದ ಯಾವುದೇ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸಭೆ ನಡೆಸಿಲ್ಲ. ಜೂನ್ ತಿಂಗಳ ಕೊನೆಯ ವಾರದಲ್ಲಿ ವಿಮ್ಸ್ ಆಡಳಿತ ಮಂಡಳಿಯ ಸಭೆಯನ್ನ ಬಳ್ಳಾರಿಯಲ್ಲೇ ಮಾಡುವುದಾಗಿ ತಿಳಿಸಿದರು.

ಆ ಸಭೆಯಲ್ಲಿ ವಿಮ್ಸ್ ಆಸ್ಪತ್ರೆಗೆ ವೈದ್ಯರ ಹಾಗೂ ಸಿಬ್ಬಂದಿ ನೇಮಕಾತಿಯ ವಿಚಾರ ಕುರಿತು ಚರ್ಚಿಸುವೆ, ಹಾಗೂ ವಿಮ್ಸ್ ಆಸ್ಪತ್ರೆಯಲ್ಲಿನ ಕಾರ್ಯವೈಖರಿ ಕುರಿತು ಚರ್ಚಿಸುವೆ. ವಿಮ್ಸ್ ಆಸ್ಪತ್ರೆ ಸೇರಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಪ್ರತಿ ತಿಂಗಳು ಟಾರ್ಗೆಟ್ ಫಿಕ್ಸ್ ಮಾಡಲಾಗುವುದು. ನಿಗದಿಪಡಿಸಿದ ಸಮಯಕ್ಕೆ ಗುರಿ ಸಾಧಿಸದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.

ಶಿಕ್ಷಣ ಸಚಿವ ಡಾ.ಕೆ.ಸುಧಾಕರ್​​

ಮಂಗಳೂರಿನ ಖಾಸಗಿ ವೈದ್ಯಕೀಯ ವಿಜ್ಞಾನ ಸಂಸ್ಥೆಯೊಂದರಲ್ಲಿ 1,200 ಹೊರ ರೋಗಿಗಳು ಹಾಗೂ 600 ಒಳ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ವಾರ್ಷಿಕವಾಗಿ 46 ಕೋಟಿ ರೂ. ಎಬಿಆರ್​ಕೆ ಹಣ ಪಡೆಯುತ್ತಿದೆ. ಆದರೆ, ಬಳ್ಳಾರಿ ವಿಮ್ಸ್ ಆಸ್ಪತ್ರೆ ಪ್ರತಿನಿತ್ಯ 2,500 ಕ್ಕೂ ಹೆಚ್ಚು ಹೊರ ರೋಗಿಗಳು ಮತ್ತು 1,000ಕ್ಕೂ ಹೆಚ್ಚು ಒಳ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರೂ ಕೇವಲ 49 ಲಕ್ಷ ರೂ. ಎಬಿಆರ್​ಕೆ ಹಣ ಪಡೆದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಮುಂದಿನ ದಿನಗಳಲ್ಲಿ ಕನಿಷ್ಠ 100 ಕೋಟಿ ರೂ. ಎಬಿಆರ್​ಕೆ ಹಣ ಪಡೆಯಬೇಕು. ಈ ಕುರಿತು ಅಧಿಕಾರಿಗಳಿಗೆ ನಿಗಾವಹಿಸುವಂತೆ ಸೂಚಿಸಿದ್ದೇನೆ ಎಂದರು.

ವಿಮ್ಸ್​ನಲ್ಲಿ ಟ್ರಾಮಾಕೇರ್ ಸೆಂಟರ್ ಉದ್ಘಾಟನೆ:

ಬಳ್ಳಾರಿಯಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಟ್ರಾಮಾಕೇರ್ ಸೆಂಟರ್​​ನ್ನ ಜು. 15ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ.ಆದ್ದರಿಂದ ತ್ವರಿತವಾಗಿ ಕಾಮಾಗಾರಿಯನ್ನು ಪೂರ್ಣಗೊಳಿಸುವಂತೆ ಸಚಿವ ಡಾ.ಕೆ. ಸುಧಾಕರ್​​ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ವಿಮ್ಸ್ ಸಿಬ್ಬಂದಿ ಭರ್ತಿ ಸಂಬಂಧಿಸಿದಂತೆ ಕೋರ್ಟ್​ನಲ್ಲಿರುವ ತಡೆಯಾಜ್ಞೆ ತೆರೆವುಗೊಳಿಸಿ ಸಿಬ್ಬಂದಿ ಭರ್ತಿ ಮಾಡಿಕೊಳ್ಳಲು ಅಗತ್ಯ ಕ್ರಮಕೈಗೊಳ್ಳಲಾಗುವುದು. ಅದೇ ರೀತಿ ವಿಮ್ಸ್ ಸುಸಜ್ಜಿತವಾಗಿ ಕಾರ್ಯನಿರ್ವಹಿಸಲು ಬೇಕಾದ ಎಲ್ಲ ಕ್ರಮಗಳನ್ನು ಎರಡು ಮೂರು ತಿಂಗಳೊಳಗೆ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಜಿಂದಾಲ್​ನಲ್ಲಿ 95 ಕೊರೊನಾ ಪಾಸಿಟಿವ್ ಕೇಸ್:

ಜಿಂದಾಲ್ ಸಮೂಹ ಸಂಸ್ಥೆಯಲ್ಲಿ ಈವರೆಗೆ ಅಂದಾಜು 95 ಕೊರೊನಾ ಪಾಸಿಟಿವ್ ಕೇಸ್​ಗಳು ಪತ್ತೆಯಾಗಿವೆ. ಇಡೀ ರಾಜ್ಯದಲ್ಲಿ ಹೆಚ್ಚು ಸಕ್ರಿಯ ಪ್ರಕರಣಗಳಿದ್ದು, ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಇನ್ನು ಶೇ. 97ರಷ್ಟು ಜನರಿಗೆ ಯಾವುದೇ ರೋಗ ಲಕ್ಷಣಗಳಿಲ್ಲ. ಉಳಿದ ಶೇ. 3ರಷ್ಟು ಸೋಂಕಿತರಿಗೆ ಮಾತ್ರ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಕೊರೊನಾ ಮಾರಾಣಾಂತಿಕ ಕಾಯಿಲೆ ಅಲ್ಲ:

ಮಹಾಮಾರಿ ಕೊರೊನಾ ಮಾರಾಣಾಂತಿಕ ಕಾಯಿಲೆ ಏನೂ ಅಲ್ಲವಾದರೂ ಅತ್ಯಂತ ಜಾಗರೂಕತೆಯಿಂದ ಇರಬೇಕಿದೆ. ದೃಶ್ಯ ಮಾಧ್ಯಮಗಳು ಯಮಪಾಸಾಣದ ಕಾಯಿಲೆ ಎಂಬಿತ್ಯಾದಿ ಟೈಟಲ್ ಕೊಟ್ಟು ಜನರನ್ನ ದಿಕ್ಕು ತಪ್ಪಿಸುವುದಾಗಲಿ ಅಥವಾ ಭಯಭೀತರನ್ನಾಗಿ‌ ಮಾಡುವುದಾಗಲಿ ಮಾಡಬಾರದು. ಈಗಾಗಲೇ ಸಾಕಷ್ಟು ಭಯಭೀತರಾಗಿದ್ದು, ಅದರಿಂದ ಮುಕ್ತವಾಗಿಸುವ ಕಾರ್ಯಕ್ಕೆ ದೃಶ್ಯ ಮಾಧ್ಯಮಗಳು ಮುಂದಾಗಬೇಕು ಎಂದರು. ಸಚಿವರು ಸುದ್ದಿಗೋಷ್ಠಿಗೂ ಮುನ್ನ ಇಲ್ಲಿನ ಡಿಸಿ ಕಚೇರಿಯಲ್ಲಿ ಜಿಂದಾಲ್ ಸಮೂಹ ಸಂಸ್ಥೆಯ ಅಧಿಕಾರಿಗಳೊಂದಿಗೆ ಕೈಗೊಂಡಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದರು.

ABOUT THE AUTHOR

...view details