ಬಿಜೆಪಿ ಅಭ್ಯರ್ಥಿಯನ್ನ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ವಿಜಯನಗರ: ಒಳ ಮೀಸಲಾತಿ ವಿಚಾರದಲ್ಲಿ ಬಿಜೆಪಿ ಪಕ್ಷವು ನಮಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಹೂವಿನ ಹಡಗಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೃಷ್ಣಾನಾಯ್ಕ ಅವರನ್ನು ಗ್ರಾಮಸ್ಥರು ತಡೆದು ತರಾಟೆಗೆ ತೆಗೆದುಕೊಂಡ ಘಟನೆ ದಾಸರಹಳ್ಳಿ ತಾಂಡಾದಲ್ಲಿ ನಡೆದಿದೆ.
ದಾಸರಹಳ್ಳಿ ತಾಂಡಾದಲ್ಲಿ ಪ್ರಚಾರ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ ಗ್ರಾಮಸ್ಥರು, ಅಭ್ಯರ್ಥಿ ಕೃಷ್ಣಾನಾಯ್ಕ ಮುಂದೆಯೇ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಬಳಿಕ ಒಳ ಮೀಸಲಾತಿ ನೀತಿ ವಿರೋಧಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಶಿಫಾರಸು ಮಾಡಿರುವ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ, ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಿದೆ ಎಂದು ಆರೊಪಿಸಿ "ಬಿಜೆಪಿ ಹಠಾವೊ, ತಾಂಡಾ ಬಚಾವೋ" ಆಕ್ರೋಶ ವ್ಯಕ್ತಪಡಿಸಿದರು.
ಮಹಿಳೆಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ನೆರೆದು ಪ್ರತಿರೋಧ ವ್ಯಕ್ತಪಡಿಸಿದರು. ಈ ವೇಳೆ ಸಮಾಧಾನಪಡಿಸಲು ಮುಂದಾದ ತಾಲೂಕು ಬಂಜಾರ ಸಮಾಜದ ಮುಖಂಡರನ್ನು ಮಹಿಳೆಯರು ತರಾಟೆಗೆ ತೆಗೆದುಕೊಂಡರು. ಇದರಿಂದ ಮುಜುಗರಕ್ಕೊಳಗಾದ ಕೃಷ್ಣನಾಯ್ಕ ಅವರು ಕಾರು ಹತ್ತಿ ವಾಪಸ್ ಮರಳಿದರು. ಮಾತೃ ಭಾಷೆಯಾದ ಲಂಬಾಣಿಯಲ್ಲೇ ಜನರ ಮನವೊಲಿಸಿದರು ಪ್ರಯತ್ನಿಸಿದರೂ ಅದು ಫಲಿಸಲಿಲ್ಲ.
ಇದನ್ನೂ ಓದಿ :ಕೊಪ್ಪಳದಲ್ಲಿ ಚುನಾವಣಾ ಪ್ರಚಾರ ಆರಂಭ: ಮತ ಕೇಳಲು ಬಂದ ಶಾಸಕರಿಗೆ ಗ್ರಾಮಸ್ಥರಿಂದ ತರಾಟೆ
ಕಾಂಗ್ರೆಸ್ ಅಭ್ಯರ್ಥಿಗೆ ತರಾಟೆ: ಇನ್ನು ಇದೇ ತಿಂಗಳ ಪ್ರಾರಂಭದಲ್ಲಿ ಗುಡಿಗೇರಿ ಗ್ರಾಮದಲ್ಲಿ ಚುನಾವಣ ಪ್ರಚಾರ ಆರಂಭಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದರು. ಗುಡಿಗೇರಿಯ ಶ್ರೀಶರಣಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಮಾಡುವ ಮೂಲಕ ಪ್ರಚಾರ ಆರಂಭಿಸಿದ್ದ ಶಾಸಕ ಹಿಟ್ನಾಳ ಬೆಂಬಲಿಗರೊಂದಿಗೆ ಗ್ರಾಮದಲ್ಲಿ ಮೆರವಣಿಗೆ ಹೊರಟಿದ್ದರು. ಈ ವೇಳೆ ಮತ ಕೇಳಲು ಬಂದ ಶಾಸಕರಿಗೆ ಕಳೆದ 10 ವರ್ಷದಿಂದ ಸರಿಯಾದ ಬಸ್ ವ್ಯವಸ್ಥೆ ಇಲ್ಲ, ಮನೆಗಳಿಗೆ ಹಣ ಬಿಡುಗಡೆಯಾಗಿಲ್ಲ. ಮೂರು ದಿನಕ್ಕೊಮ್ಮೆ ನೀರು ಬರುತ್ತದೆ ಎಂದು ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದರು. ಎಲೆಕ್ಷನ್ ಬಂದಾಗ ಮಾತ್ರ ನಾವೆಲ್ಲ ನಿಮಗೆ ನೆನಪಾಗುತ್ತೇವೆ. ಚುನಾವಣೆ ಮುಗಿದ ಬಳಿಕ ನಾವು ಯಾರು ಎನ್ನುವುದೇ ನಿಮಗೆ ನೆನಪಿರುವುದಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ :ನಿಮ್ಮದೇ ಸರ್ಕಾರ ಇದ್ರೂ ಯಾಕೆ ಭೂಮಿ ಉಳಿಸಲಿಲ್ಲ: ಪ್ರಚಾರಕ್ಕೆ ಬಂದ ಕುಮಾರ್ ಬಂಗಾರಪ್ಪಗೆ ಗ್ರಾಮಸ್ಥರ ಪ್ರಶ್ನೆ
ಹಾಗೆಯೇ, ಸೊರಬ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಶಾಸಕ ಕುಮಾರ್ ಬಂಗಾರಪ್ಪ ಅವರನ್ನು ಗ್ರಾಮಸ್ಥರು ಪ್ರಶ್ನಿಸಿದ ಪ್ರಸಂಗ ಏಪ್ರಿಲ್ 8 ರಂದು ನಡೆದಿತ್ತು. ಸೊರಬ ತಾಲೂಕಿನ ಪುಟ್ಟನಹಳ್ಳಿ ಗ್ರಾಮದಲ್ಲಿ ಪ್ರಚಾರಕ್ಕೆ ತೆರಳಿದ್ದ ವೇಳೆ ಗ್ರಾಮಸ್ಥರು ಬಗರ್ ಹುಕುಂ ಭೂಮಿ ತೆರವು ಮಾಡಿದ ವಿಚಾರವಾಗಿ ಶಾಸಕರನ್ನು ಪ್ರಶ್ನೆ ಮಾಡಿದ್ದರು. ನಿಮ್ಮದೇ ಸರ್ಕಾರ ಇತ್ತು. ಯಾಕೆ ಭೂಮಿಯನ್ನು ಉಳಿಸಲಿಲ್ಲ. ಭೂಮಿ ತೆರವು ಮಾಡವುದನ್ನ ನೀವು ಉಳಿಸಬಹುದಾಗಿತ್ತು. ಶಾಸಕರಾಗಿ ನೀವು ಏನೂ ಮಾಡಲಿಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದರು.