ಹೊಸಪೇಟೆ(ವಿಜಯನಗರ): ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮಕರಬ್ಬಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ಆರು ಜನ ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ ಇಂದು ಚಿಕಿತ್ಸೆ ಪಡೆಯುತ್ತಿದ್ದ ಪಿಂಜಾರ್ ಶರೀಪ್ ಸಾಬ್ ಎಂಬುವರ ಸ್ಥಿತಿ ಗಂಭೀರವಾಗಿದ್ದು, ಜನರು ಆತಂಕಕ್ಕೊಳಗಾಗಿದ್ದಾರೆ.
ಕಲುಷಿತ ನೀರು ಕುಡಿದ ಪ್ರಕರಣ ನೀರು ಕುಡಿದು ಅಸ್ವಸ್ಥಗೊಂಡಿದ್ದ ಶರೀಫ್ ಸಾಬ್ಗೆ ಬ್ರೇನ್ ಸ್ಟ್ರೋಕ್ ಆಗಿತ್ತು. ನಂತರ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಹಾವೇರಿಗೆ ಕೊಂದೊಯ್ಯಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಮಕರಬ್ಬಿ ಗ್ರಾಮದಲ್ಲಿ ಸೂತಕದ ಛಾಯೆ: ಘಟನೆಯ ನಂತರ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳ ಕುಟುಂಬಸ್ಥರಿಗೆ ದಿಕ್ಕು ತೋಚದಂತಾಗಿದೆ. ಇನ್ನೂ ಹಲವರು ಸರಣಿ ಸಾವಿನ ಸಂಖ್ಯೆಗೆ ಹೆದರಿ ಊರನ್ನೇ ತೊರೆದಿದ್ದಾರೆ.
ಚಿಕಿತ್ಸೆಗಾಗಿ ಪರದಾಟ: ಕುಟಂಬಸ್ಥರಿಗೆ ಚಿಕಿತ್ಸೆ ಕೊಡಿಸಲು ಗ್ರಾಮಸ್ಥರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಸ್ಥಳಕ್ಕೆ ಆರೋಗ್ಯ ಸಿಬ್ಬಂದಿ ಭೇಟಿ ನೀಡಿ, ನೀರನ್ನು ಸಂಗ್ರಹಿಸಿದ್ದು, ಇದರ ವರದಿ ಬರಬೇಕಿದೆ.
ಈ ಕುರಿತು ಅಲ್ಲಿನ ಪರಿಸ್ಥಿತಿ ಕುರಿತು ಈಟಿವಿ ಭಾರತ ಪ್ರತಿನಿಧಿ ಪ್ರತ್ಯಕ್ಷ ವರದಿ ಮಾಡಿದ್ದು, ಗ್ರಾಮಸ್ಥರು ಮತ್ತು ಸಂತ್ರಸ್ತರು ತಮ್ಮೂರಿನ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ. ಚಿಕಿತ್ಸೆ ಪಡೆದು ಪ್ರಾಣ ಉಳಿಸಿಕೊಳ್ಳಲು ಕೆಲವರು ತಮ್ಮ ಜಾನುವಾರುಗಳನ್ನೇ ಮಾರಿದ್ದಾರೆ ಎಂದು ಸಂತ್ರಸ್ತರ ಸಂಕಷ್ಟವನ್ನು ಬಿಚ್ಚಿಟ್ಟಿದ್ದಾರೆ.